Advertisement

ಸೆವೆನ್‌ ಇನ್‌ ಒನ್‌ ಕಾರ್ಯಕ್ರಮ

06:30 AM Nov 10, 2017 | Harsha Rao |

ಅದು ಕೇವಲ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮವಾಗಿರಲಿಲ್ಲ. ಆಡಿಯೋ ಸಿಡಿ ಬಿಡುಗಡೆ ನೆಪದಲ್ಲಿ ಒಂದೇ ಏಟಿಗೆ ಏಳು ಕಾರ್ಯಕ್ರಮ ನಡೆಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು ಅಂದಿನ ವಿಶೇಷವಾಗಿತ್ತು. ಅಂದಹಾಗೆ, ಅದು “ಜನ ಗಣ ಮನ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಚಿತ್ರತಂಡ ಅಂದು ಮಾಡಿಕೊಂಡಿದ್ದ ಯೋಚನೆ ಮತ್ತು ಯೋಜನೆ ಒಂದೇ ಕಾರ್ಯಕ್ರಮದಲ್ಲಿ ಫ‌ಲಿಸಿತು. ಅಷ್ಟಕ್ಕೂ ಆ ಯೋಚನೆ, ಯೋಜನೆ ಅಂದರೆ, ಟೀಸರ್‌, ವೀಡಿಯೋ ಸಾಂಗ್‌, ಟ್ರೇಲರ್‌, ಮೇಕಿಂಗ್‌ ವೀಡಿಯೋ, ಲಿರಿಕಲ್‌ ವೀಡಿಯೋ, ಪೋಸ್ಟರ್‌ ವೀಡಿಯೋ ಬಿಡುಗಡೆ ಮಾಡಿ, “ಜಯ ಜಯ ಜಯ ಹೇ …’ ಅಂತ ಹಾಡಿ ನಲಿದಾಡಿತು!

Advertisement

ಹೌದು, ನಿರ್ಮಾಪಕ ಶೈಲೇಂದ್ರಬಾಬು ಟೀಸರ್‌ ಬಿಡುಗಡೆ ಮಾಡಿದರೆ, ನಾಗೇಶ್‌ಕುಮಾರ್‌ ಟ್ರೇಲರ್‌ಗೆ ಚಾಲನೆ ಕೊಟ್ಟರು. ಐತಾಳ್‌ ವೀಡಿಯೋ ಸಾಂಗ್‌ ಬಿಡುಗಡೆ ಮಾಡಿದರು. ಎನ್‌.ಎಂ.ಸುರೇಶ್‌, ಲಿರಿಕಲ್‌ ವೀಡಿಯೋಗೆ ಚಾಲನೆ ನೀಡಿದರು. ಎಚ್‌. ವಾಸು ಮೇಕಿಂಗ್‌ ವೀಡಿಯೋ ರಿಲೀಸ್‌ ಮಾಡಿದರು. ಪ್ರವೀಣ್‌ಕುಮಾರ್‌ ಪೋಸ್ಟರ್‌ ವೀಡಿಯೋ ರಿಲೀಸ್‌ ಮಾಡಿದರು. ಎಲ್ಲರೂ ಬಿಡುಗಡೆ ಮಾಡಿದ ಟೀಸರ್‌, ಟ್ರೇಲರ್‌, ವೀಡಿಯೋ ಸಾಂಗ್‌, ಮೇಕಿಂಗ್‌ ವೀಡಿಯೋ ನೋಡಲಾಯಿತು. ಆಮೇಲೆ ಅವರೆಲ್ಲರೂ ಪ್ರೀತಿಯಿಂದ ಚಿತ್ರತಂಡಕ್ಕೆ ಶುಭಹಾರೈಸಿದರು.

ಅಂದು ಕೊನೆಯದ್ದಾಗಿ ಉಳಿದದ್ದು ಆಡಿಯೋ ಸಿಡಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಡುಗಳನ್ನು ಬಿಡುಗಡೆ ಮಾಡಿದರು. “ಸುಮಾರು 25 ಚಿತ್ರಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ ನಿರ್ದೇಶಕ ಶಶಿಕಾಂತ್‌ ಅವರ ಮೊದಲ ಚಿತ್ರವಿದು. ಈ ಚಿತ್ರ ಅವರಿಗೆ ಗೆಲುವು ಕೊಡಬೇಕು. ನಿರ್ಮಾಪಕರು, ಸಮಯ ನೋಡಿ ಚಿತ್ರ ಬಿಡುಗಡೆ ಮಾಡಿ’ ಅಂತ ಕಿವಿಮಾತು ಹೇಳಿದರು ಸಾ.ರಾ.ಗೋವಿಂದು.

“ಜನ ಗಣ ಮನ” ಚಿತ್ರವನ್ನು ಮೊದಲು ಆನಂದ್‌ ಪಿ.ರಾಜು ಮಾಡಬೇಕಿತ್ತು. ಅವರ ಆರೋಗ್ಯ ಕೈ ಕೊಟ್ಟಿದ್ದರಿಂದ ಆ ಚಿತ್ರಕ್ಕೆ ಶಿಷ್ಯ ಶಶಿಕಾಂತ್‌ ಅವರನ್ನು ನಿರ್ದೇಶಕರನ್ನಾಗಿ ಮಾಡಿದರು. ಆ ಕುರಿತು ಆನಂದ್‌ ಪಿ.ರಾಜ್‌ ಹೇಳಿದ್ದಿಷ್ಟು, “ನಿರ್ಮಾಪಕರು ನನ್ನ ಮಾತು ನಂಬಿ ಶಶಿಕಾಂತ್‌ಗೆ ಚಿತ್ರ ಕೊಟ್ಟಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನಾಯಕಿ ಆಯಿಷಾ ನಿರೀಕ್ಷೆ ಮೀರಿ ನಟಿಸಿದ್ದಾರೆ. ಇದೊಂದು ಯಶಸ್ವಿ ಚಿತ್ರ ಆಗಲಿ’ ಅಂದರು ಆನಂದ್‌ ಪಿ.ರಾಜ್‌.

ನಾಯಕಿ ಆಯಿಷಾ ಗ್ಯಾಪ್‌ ನಂತರ ಮಾಡುತ್ತಿರುವ ಚಿತ್ರವಿದು. ಅವರಿಗೆ, ಆನಂದ್‌ ಪಿ.ರಾಜು ಕಥೆ ಹೇಳಿದಾಗ, ಖುಷಿಯಾಯಿತಂತೆ. ಈಗಿನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಆಗುವ ದೌರ್ಜನ್ಯ ವಿರುದ್ಧ ಹೋರಾಡು ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದಾರಂತೆ. ಎಂದಿಗಿಂತ ಖಡಕ್‌ ಡೈಲಾಗ್‌ಗಳಿವೆ, ಅದ್ಭುತ ಸ್ಟಂಟ್ಸ್‌ ಇದೆ ಅಂದರು ಆಯಿಷಾ.
ಗೌತಮ್‌ ಶ್ರೀವತ್ಸ ಇಲ್ಲಿ ಸಂಗೀತ ನೀಡಿದ್ದಾರೆ. “ಇದೊಂದು ದೇಶಪ್ರೇಮ ಮೂಡಿಸುವ ಶೀರ್ಷಿಕೆಯಾಗಿದ್ದು, ಚಿತ್ರದಲ್ಲಿ ಒಳ್ಳೆಯ ಅಂಶಗಳಿವೆ. ನಾಯಕಿ ಕೆಟ್ಟ ವ್ಯವಸ್ಥೆ ವಿರುದ್ಧ ಹೇಗೆ ಹೋರಾಡುತ್ತಾಳೆ ಎಂಬುದಿಲ್ಲಿ ಹೈಲೈಟ್‌. ಪೂರಕವಾಗಿಯೇ ಹಾಡುಗಳಿವೆ’ ಅಂದರು ಗೌತಮ್‌.

Advertisement

ನಿರ್ದೇಶಕ ಶಶಿಕಾಂತ್‌, ಅವಕಾಶ ಕೊಟ್ಟ ನಿರ್ಮಾಪಕ ಸಾಂಬಾಶಿವ ರೆಡ್ಡಿ ಹಾಗೂ ಕೆಲಸ ಕಲಿಸಿಕೊಟ್ಟ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಇಲ್ಲಿ ತಾಯಿ ಸೆಂಟಿಮೆಂಟ್‌, ಲವ್‌, ಭ್ರಷ್ಟಚಾರ, ಕೆಟ್ಟ ವ್ಯವಸ್ಥೆ ಎಲ್ಲವೂ ಇದೆ. ಹೊಸ ನಿರೂಪಣೆಯೊಂದಿಗೆ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು. ಅವರು ಮಾತನಾಡುವ ಹೊತ್ತಿಗೆ ಸಮಯ ಮೀರಿತ್ತು. ಕಾರ್ಯಕ್ರಮಕ್ಕೂ ತೆರೆಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next