ವರ್ಷಾಂತ್ಯದ ಸಿನಿಮಾ ರಿಲೀಸ್ ಭರಾಟೆ ಜೋರಾಗಿಯೇ ಇದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಕಳೆದ ವಾರ ಐದು ಸಿನಿಮಾಗಳು ತೆರೆಕಂಡರೆ ಈ ವಾರ ಬರೋಬ್ಬರಿ ಏಳು ಸಿನಿಮಾಗಳು ತೆರೆಕಾಣುತ್ತಿವೆ. ಈ ಮೂಲಕ ಈ ವಾರ ಕನ್ನಡ ಚಿತ್ರರಂಗ ಮತ್ತೆ ರಂಗೇರುತ್ತಿದೆ.
ಈ ವಾರ “ಅಬ್ಬರ’, “ಧಮ್’, “ಮಠ’, “ಕುಳ್ಳನ ಹೆಂಡತಿ’, “ದಿ ಫಿಲಂ ಮೇಕರ್’, “ಆವರ್ತ’, “ಖಾಸಗಿ ಪುಟಗಳು’ ಚಿತ್ರಗಳು ಈ ವಾರ ತೆರೆಕಾಣುತ್ತಿವೆ.
ಎಲ್ಲಾ ಓಕೆ, ವರ್ಷಾಂತ್ಯಕ್ಕೆ ಇಷ್ಟೊಂದು ಸಿನಿಟ್ರಾಫಿಕ್ ಯಾಕೆ ಎಂದು ನೀವು ಕೇಳಬಹುದು. ಅನೇಕ ಸಿನಿಮಾಗಳು ಲಾಕ್ ಡೌನ್ ಮುಂಚೆ ತಯಾರಾಗಿವೆ. ಆದರೆ, ಸಿನಿಮಾ ಬಿಡುಗಡೆಯ ಹಾದಿಯಲ್ಲಿ ಎದುರಾದ ತೊಂದರೆಗಳಿಂದ ರಿಲೀಸ್ ತಡವಾಗುತ್ತಾ ಬಂದಿವೆ. ಸದ್ಯ ಚಿತ್ರಮಂದಿರಗಳಿಂದ ಹಿಡಿದು ಎಲ್ಲವೂ ಕೂಡಿ ಬಂದ ಕಾರಣ ಸಿನಿಮಾ ಬಿಡುಗಡೆ ಮಾಡುತ್ತಿವೆ.
ಇದು ಕೇವಲ ಈ ವಾರದ ಕಥೆಯಲ್ಲ, ಮುಂದಿನ ವಾರವೂ ಸಾಕಷ್ಟು ಸಿನಿಮಾಗಳು ಬಿಡುಗಡೆಯ ಕ್ಯೂನಲ್ಲಿವೆ. ಈ ವಾರ ಬಿಟ್ಟರೆ ಮತ್ತೆ ತಿಂಗಳುಗಟ್ಟಲೇ ಮುಂದೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆ ಯಾಗುತ್ತಿವೆ.
ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷದಿಂದ ಸಿನಿಮಾ ಬಿಡುಗಡೆಯಲ್ಲಿ ಕುಸಿತ ಕಂಡಿತ್ತು. ಆದರೆ, ಈ ವರ್ಷ ಕನ್ನಡ ಚಿತ್ರರಂಗ ಮತ್ತೆ ತನ್ನ ಹಳೆಯ ಟ್ರ್ಯಾಕ್‌ಗೆ ಮರಳಿದೆ. ಈಗಗಾಲೇ 177ಕ್ಕೂ ಹೆಚ್ಚು ಚಿತ್ರಗಳು ತೆರೆಕಂಡಿವೆ. ಇನ್ನೂ ಉಳಿದ ಏಳು ವಾರಗಳಲ್ಲಿ ಕಡಿಮೆ ಎಂದರೂ 25ಕ್ಕೂ ಹೆಚ್ಚು ಚಿತ್ರಗಳು ತೆರೆಕಾಣುವ ಸಾಧ್ಯತೆ ಇದೆ. ಅಲ್ಲಿಗೆ ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ 200 ದಾಟಲಿದೆ.