ಷೇರುಪೇಟೆಯಲ್ಲಿ ಸೆನ್ಸ್‌ಕ್ಸ್ ಬೆಲೆ ಏರುವುದು ದಿಢೀರನೆ ಕುಸಿತ ಕಾಣುವುದೂ ತೀರ ಸಾಮಾನ್ಯ. ಹಾಗಾಗಿ, ಸೆನ್ಸ್‌ಕ್ಸ್ ಏರಿದಾಗ ಅಥವಾ ಇಳಿದಾಗ ಅನಗತ್ಯವಾಗಿ ಸಂಭ್ರಮಿಸುವ, ಕಂಗಾಲಾಗಿ ಪರಿತಪಿಸುವ ಅಗತ್ಯ ಖಂಡಿತ ಇಲ್ಲ….
ನಮ್ಮ ಜೀವನದಲ್ಲಿ ಏಳು ಬೀಳುಗಳು ಇರುತ್ತವಲ್ಲ. ಅಂಥದೇ ಏಳುಬೀಳುಗಳನ್ನು ನಾವು ಹಾಗೆ ಷೇರು ಪೇಟೆಯಲ್ಲಿಯೂ ನೋಡುತ್ತೇವೆ. ಕಳೆದ ಕೆಲ ದಿನಗಳಿಂದ ಷೇರು ಪೇಟೆ ಕುಸಿತದಲ್ಲಿದೆ. ಈ ಕುಸಿತ ಎಷ್ಟು ತೀವ್ರವಾಗಿದೆ ಎಂದರೆ, ಸೆನ್ಸೆಕ್ಸ್ 10557 ಪಾಯಿಂಟ್ ನಿಂದ 11760 ಪಾಯಿಂಟ್ ಗೆ ಏರುವುದಕ್ಕೆ 41 ವಹಿವಾಟು ದಿನಗಳು ಬೇಕಾದವು. ಆದರೆ ಈಗ ಸೆನ್ಸೆಕ್ಸ್ ಮೊದಲಿನ ಅದೇ ಹಂತಕ್ಕೆ ಬರಲು ಕೇವಲ 24 ದಿನಗಳು ಹಿಡಿಯಿತು.
ಸೂಕ್ಷ್ಮವಾಗಿ ಗಮನಿಸಿ. ಸೆನ್ಸೆಕ್ಸ್ ಏರಲು 41 ದಿನಗಳು. ಇಳಿಯಲು 24 ದಿನಗಳು. ಮಾರುಕಟ್ಟೆಯ ಕುಸಿತವೇ ಹೀಗೆ. ಇಂತಹ ಕುಸಿತ ಬಂದಾಗ ಹೂಡಿಕೆದಾರರು ಕಂಗಾಲಾಗುತ್ತಾರೆ. ಷೇರು ಪೇಟೆ ಕುಸಿದಾಗ ಮ್ಯೂಚುವಲ್ ಫಂಡ್ ಗಳ ಎನ್.ಎ.ಪಿ-ನೆಟ್ ಅಸೆಟ್ ವ್ಯಾಲ್ಯೂ ಕೂಡ ಕಡಿಮೆ ಆಗುತ್ತದೆ. ಆಗ ಹಣ ಹೂಡಿದವರಿಗೆ ಆತಂಕ ಆಗುವುದು ನಿರ್ವಿವಾದ. ಹೂಡಿಕೆಯಲ್ಲಿ ಇವೆಲ್ಲವೂ ಸಹಜವೆಂದು ಅರಿತಿರಲೇ ಬೇಕು.
ಈಗ ಬಿದ್ದ ಷೇರು ಪೇಟೆಯಲ್ಲಿ ಇನ್ನೂ ಕುಸಿತದ ಮಾತುಗಳೇ ಕೇಳಿ ಬರುತ್ತಿವೆ. ಕುಸಿತ ಇನ್ನೂ ಎಷ್ಟು ದಿನ ಇರಬಹುದು ಎನ್ನುವುದಕ್ಕೆ ಖಚಿತ ಉತ್ತರ ನೀಡುವ ಧೈರ್ಯ ಮತ್ತು ಶಕ್ತಿ ಯಾರಿಗೂ ಇಲ್ಲ. ಇಂಥ ಸಂದರ್ಭದಲ್ಲಿ ಹೂಡಿಕೆದಾರರು ಕಂಗಾಲಾಗುವ ಅಗತ್ಯವಿಲ್ಲ. ಅವರು, ತೀವ್ರ ಕುಸಿತದ ಸಂದರ್ಭವನ್ನು ಖರೀದಿಯ ಕಾಲವಾಗಿ ಬಳಸಿಕೊಳ್ಳುವುದಕ್ಕೆ ನೋಡಬಹುದು. ಹೀಗಿದ್ದೂ ನೆನಪಿಡಬೇಕಾದದ್ದು ಇದಕ್ಕೆ ಅವಸರ ಇಲ್ಲ ಎನ್ನುವುದು.
ಮಳೆ ಬರುತ್ತದೆ. ಮಳೆ ನಿಲ್ಲುವುದಕ್ಕೆ ಮೊದಲು ಮತ್ತೆ ಮತ್ತೆ ಸಣ್ಣ ಪ್ರಮಾಣದ ಮಳೆ ಬರುತ್ತದೆ ಹೌದು, ತಾನೇ? ಅಂತೆಯೇ, ಕುಸಿಯುತ್ತಿರುವ ಪೇಟೆಯಲ್ಲಿ ಆಗೀಗ ಮಳೆ ನಿಂತ ಹಾಗೆ ಏರಿಕೆ ಬರಬಹುದು. ಆದರೆ ಇವು ಮತ್ತೆ ಬೀಳುವ ತಯಾರಿಯೂ ಆಗಬಹುದು. ಯಾವಾಗ ಕುಸಿತ ನಿಂತು ಚೇತರಿಕೆ ಆರಂಭ ಆಯಿತೋ, ಆಗ ಹೂಡಿಕೆಯ ಬಗೆಗೆ ಯೋಚಿಸಬಹುದು. ಮ್ಯೂಚುವಲ್ ಫಂಡ್ ಕೂಡ ಸಾಕಷ್ಟು ಇಳಿಕೆ ಕಂಡಿರುವಾಗ ಹೂಡಿಕೆಯ ಅವಕಾಶ ಇದೆ.
ಆದರೆ ಯಾವುದೇ ಹೂಡಿಕೆಯನ್ನು ಹಂತ ಹಂತವಾಗಿ ಮಾಡಲೇ ಬೇಕು. ಯಾವುದೂ ಎಲ್ಲಿಗೂ ಓಡಿ ಹೋಗುವುದಿಲ್ಲ. ಹಾಗಾಗಿ, ಮ್ಯೂಚುವಲ್ ಫಂಡ್ ಖರೀದಿಸಿ ಕಷ್ಟಕ್ಕೆ ಸಿಕ್ಕಿಕೊಂಡೆ ಎಂದು ಕೊರಗುತ್ತ ಕೂರಬೇಕಾದ ಅಗತ್ಯವಿಲ್ಲ. ಇಲ್ಲಿ ಲಾಭ ಮಾಡುವ ಅವಕಾಶ ಈಗಲ್ಲದಿದ್ದರೆ ಇನ್ನೊಮ್ಮೆ ಸಿಕ್ಕೇ ಸಿಗುತ್ತದೆ. ಹಾಗಾಗಿ, ಹೂಡಿಕೆಗೆ ಸಂಬಂಧಿಸಿದಂತೆ, ಒಂದು ಅವಕಾಶ ತಪ್ಪಿದರೂ ತಪ್ಪು ನಿರ್ಧಾರ ತಗೆದುಕೊಳ್ಳುವುದಕ್ಕಿಂತ ಇದು ಒಳ್ಳೆಯದು ಎಂದು ಭಾವಿಸಿ
* ಸುಧಾಶರ್ಮಾ ಚವತ್ತಿ