‘ಕಾಮನಬಿಲ್ಲು’ ಎಂಬ ಪದವನ್ನು ಅದೇ ಹೆಸರಿನ ಚಿತ್ರದ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಈಗ ಅದೇ ಅರ್ಥವನ್ನು ಹೊಂದಿರುವ ‘ಮಳೆಬಿಲ್ಲು’ ಎನ್ನುವ ಹೆಸರಿನ ಚಿತ್ರವೊಂದು ತೆರೆಗೆ ಬರುತ್ತಿದೆ. ನವ ನಿರ್ದೇಶಕ ನಾಗರಾಜ್ ಹಿರಿಯೂರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಸದ್ಯ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಮಳೆಬಿಲ್ಲು’ ಚಿತ್ರತಂಡ, ಇತ್ತೀಚೆಗೆ ತನ್ನ ಹಾಡುಗಳನ್ನು ಹೊರತಂದಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನಾಗರಾಜ್ ಹಿರಿಯೂರು, ‘ಪ್ರೀತಿಯನ್ನು ಪ್ರಕೃತಿಯ ಹಲವಾರು ವಿಸ್ಮಯಗಳಿಗೆ ಹೋಲಿಸುತ್ತಾರೆ. ಅದರಲ್ಲಿ ಮಳೆಬಿಲ್ಲು ಕೂಡ ಒಂದು. ಅಂಥದ್ದೇ ಒಂದು ವಿಸ್ಮಯ ಈ ಚಿತ್ರದಲ್ಲೂ ಇರುವುದರಿಂದ, ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಮಳೆಬಿಲ್ಲು ಎನ್ನುವ ಟೈಟಲ್ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಬಿಸಿಲಲ್ಲಿ ಮಳೆಬಂದಾಗ ಮೂಡುವ ಏಳು ಬಣ್ಣಗಳ ಮಳೆಬಿಲ್ಲು ನೋಡಲು ಅದ್ಭುತವೆನಿಸುತ್ತದೆ. ಈ ಮಳೆಬಿಲ್ಲನ್ನು ಮನುಷ್ಯನ ಜೀವನದ ಕಲರ್‌ಫುಲ್ ಲೈಫ್ಗೆ ಹೋಲಿಸಿ ಕಥೆಯೊಂದನ್ನು ರೆಡಿ ಮಾಡಿಕೊಂಡು, ಈ ಚಿತ್ರವನ್ನು ಮಾಡಿದ್ದೇವೆ’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತಾರೆ.
ಚಿತ್ರದ ಕಥೆ ಬಗ್ಗೆ ಮಾತನಾಡುವ ನಿರ್ದೇಶಕ ನಾಗರಾಜ್, ‘ಕೆಲ ವರ್ಷಗಳ ಹಿಂದೆ ಹೈಸ್ಕೂಲ್ನಲ್ಲಿ ನಡೆದಂಥ ನೈಜ ಘಟನೆಯೊಂದನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಈ ಚಿತ್ರದಲ್ಲಿ ಕಥೆಯೇ ಹೀರೋ. ಇಲ್ಲಿ ಹೆಣ್ಣು ಮತ್ತು ಪ್ರೀತಿ ಎರಡರ ಸಂಗಮವಿದೆ. 80ರ ದಶಕದಲ್ಲಿ ಬಂದಿದ್ದ ಪ್ರೇಮಲೋಕ ಚಿತ್ರದ ಹಾಡುಗಳುಮತ್ತು ಆ ಚಿತ್ರವನ್ನು ಮತ್ತೂಮ್ಮೆ ನೆನಪಿಸುವಂತೆ ಈ ಚಿತ್ರವಿದೆ. ಹುಡುಗರ ಜೀವನ ಬಿಳಿಹಾಳೆ ಇದ್ದ ಹಾಗೆ. ಅವರ ಲೈಫ್ನಲ್ಲಿ ಹುಡುಗಿಯೊಬ್ಬಳು ಬಂದಾಗ ಏನೇನಾಗುತ್ತದೆ ಎಂಬುದೇ ಚಿತ್ರ’ ಎನ್ನುತ್ತಾರೆ.
ಇನ್ನೊಂದು ವಿಶೇಷವೆಂದರೆ, ‘ಮಳೆಬಿಲ್ಲು’ ಚಿತ್ರದಲ್ಲಿ ಬರೋಬ್ಬರಿ ಒಂಬತ್ತು ಹಾಡುಗಳಿದ್ದು, ಗಣೇಶ್ ನಾರಾಯಣ್ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ನಾಗರಾಜ್ ಎಲ್ಲಾ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ, ‘ಮಳೆಬಿಲ್ಲು’ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ.
‘ಮಳೆಬಿಲ್ಲು’ ಚಿತ್ರದಲ್ಲಿ ನವನಟ ಶರತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಹೈಸ್ಕೂಲ್ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿಯಾಗಿ ಎರಡು ಶೇಡ್ ಇರುವ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಂಜನಾ ಹಾಗೂ ನಯನಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ನಾಗರಾಜ್ ಹಿರಿಯೂರು ಅವರ ಸಹೋದರ ನಿಂಗಪ್ಪ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸದ್ಯ ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿರುವ ‘ಮಳೆಬಿಲ್ಲು’ ಚಿತ್ರವನ್ನು ಇದೇ ಜುಲೈ ಕೊನೆ ವಾರ ತೆರೆಗೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ.