Advertisement

Flower: ಬರದಲ್ಲಿಯೂ ಕೈಹಿಡಿಯದ ಸೇವಂತಿಗೆ

04:42 PM Sep 25, 2023 | Team Udayavani |

ಅರಕಲಗೂಡು: ತಾಲೂಕಿನಲ್ಲಿ ಮುಂಗಾರು ಮಳೆ ಆರಂಭದಿಂದಲೇ ಕೈಕೊಟ್ಟ ಪರಿಣಾಮ ಕೈಗೊಂಡಿದ್ದ ಬಹುತೇಕ ಬೆಳೆಗಳು ನಾಶಗೊಂಡಿವೆ. ಈ ಹಂತದಲ್ಲಿ ಪರ್ಯಾಯವಾಗಿ ಕಷ್ಟಪಟ್ಟು ಮಾಡಿದ್ದ ಸೇವಂತಿಗೆ ಹೂ ಬೆಳೆ ರೈತನ ಜೇಬು ತುಂಬಿಸುವ ಬದಲು ಕೈಸುಟ್ಟುಕೊಳ್ಳುವಂತೆ ಮಾಡಿದೆ.

Advertisement

150 ಹೆಕ್ಟೇರ್‌: ತಾಲೂಕಿನ ಕಸಬಾ, ದೊಡ್ಡಮಗ್ಗೆ, ರಾಮನಾಥಪುರ, ಕೇರಳಾಪುರ ಹಾಗೂ ಕೊಣನೂರು ಹೋಬಳಿಗಳ ವ್ಯಾಪ್ತಿಯಲ್ಲಿ ರೈತರು 150 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಸೇವಂತಿಗೆ, ಚೆಂಡೂವು ಬೆಳೆಗಳನ್ನು ಕೈಗೊಂಡಿದ್ದಾರೆ. ಸುಮಾರು 5 ತಿಂಗಳ ಬೆಳೆಇದಾಗಿದ್ದು, 75ದಿನಗಳಿಂದ ಹೂ ಕೊಯ್ಯಲು ಆರಂಭಗೊಂಡು 150 ದಿನಗಳ ಕಾಲ ಫಸಲನ್ನು ನೀಡುವ ಬೆಳೆ ಇದಾಗಿದೆ.

ಮಾರು ಹೂವಿಗೆ 10ರಿಂದ 30 ರೂ: ವಿಶೇಷವಾಗಿ ವರಮಹಾಲಕ್ಷ್ಮಿà, ಗೌರಿ-ಗಣೇಶ ಹಬ್ಬ ಹಾಗೂ ಕೇರಳಾದ ಓಣಂ ಹಬ್ಬದಲ್ಲಿ ಸೇವಂತಿಗೆ ಹೂಗೆ ಭಾರಿ ಬೇಡಿಕೆ ಇರುವ ಕಾರಣ ಮಾರಿಗೆ 100 ರಿಂದ 200 ರೂ. ವರೆಗೆ ದರ ಈ ಹಿಂದಿನ ವರ್ಷಗಳಲ್ಲಿ ದೊರೆಯುತ್ತಿತ್ತು. ಆದರೆ, ಈಗಾಗಲೇ ವರಮಹಾಲಕ್ಷ್ಮೀ, ಗೌರಿ ಗಣೇಶ , ಓಣಂ ಹಬ್ಬಗಳು ಮುಗಿದಿದ್ದು, ಕೇವಲ ಮಾರು ಹೂ 10ರಿಂದ 30 ರೂ. ತನಕವೂ ಮಾರಾಟವಾಗಿದೆ. ಸೇವಂತಿಗೆ ಹೂ ಗೆ ಅಧಿಕ ಬೆಲೆ ದೊರೆಯುತ್ತಿದ್ದ ಪರಿಣಾಮ ಈ ಬಾರಿ ಅಪಾರ ಬೆಳೆಗಾರರು ಹೂ ಬೆಳೆಯನ್ನು ಕೈಗೊಂಡು ಅಧಿಕ ಬೆಲೆ ಸಿಗಬಹುದೆಂದು ನೆಚ್ಚಿಕೊಂಡಿದ್ದರು. ಅಲ್ಲದೇ ದೂರದ ಕೇರಳ, ಮಂಗಳೂರು, ಮಡಿಕೇರಿ, ಬೆಂಗಳೂರು ನಗರಗಳಿಗೆ ಹೂವು ಸಾಗಿಸಿ ಬೆಲೆ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಹೂ ಕೇಳುವವರೇ ಇಲ್ಲವಾದ ಹಿನ್ನೆಲೆ ಬೆಳೆಯನ್ನು ನಾಶಗೊಳಿಸಲು ಮುಂದಾಗುತ್ತಿರುವುದು ಕಂಡುಬಂದಿದೆ.

ಅಧಿಕ ವೆಚ್ಚ: ಒಂದು ಎಕರೆ ಪ್ರದೇಶದಲ್ಲಿ ಹೂ ಬೆಳೆ ಕೈಗೊಳ್ಳಲು 30 ಸಾವಿರ ರೂ. ವೆಚ್ಚವಾಗುತ್ತದೆ. ಅಲ್ಲದೆ ಹೂ ಕಿತ್ತು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ. ಒಬ್ಬರಿಗೆ ಒಂದು ಸಾವಿರ ರೂ. ಕೂಲಿ ಕೊಡಬೇಕಿದ್ದು, ಹೂ ದರಕ್ಕಿಂತ್ತ ಕೂಲಿ ದರವೇ ಅಧಿಕವಾಗುತ್ತಿರುವ ಪರಿಣಾಮ ರೈತರು ಫಸಲು ಇರುವ ಹಂತದಲ್ಲಿಯೇ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿ ನಾಶಗೊಳಿಸಲು ನಿರತವಾಗುತ್ತಿದ್ದಾರೆ.

ಹೂ ಬೆಳೆಗಾರರ ಅಳಲು: ತಾಲೂಕಿನ ದುಮ್ಮಿ ಗ್ರಾಮದ ರೈತ ಚಂದ್ರಶೇಖರ್‌ ಎಂಬುವರು ಬೆಲೆ ಇಲ್ಲದ ಕಾರಣ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೇವಂತಿಗೆ ಗಿಡಗಳನ್ನು ಹೂ ಸಮೇತ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ನಾಶಪಡಿಸುತಿದ್ದಾರೆ. ಕಳೆದ ವಾರ ಗೌರಿ ಗಣೇಶ ಹಬ್ಬದ ಸಮಯದಲ್ಲೂ ಸೇವಂತಿ ಹೂವಿಗೆ ಬೆಲೆ ಸಿಗಲಿಲ್ಲ. ಉತ್ತಮ ಲಾಭ ಗಳಿಸುವ ಆಸೆಯಿಂದ ಅಪಾರ ಶ್ರಮ ವಹಿಸಿ ಬೆಳೆದಿದ್ದ ಬೆಳೆ ನಮ್ಮ ಕುಟುಂಬವನ್ನು ಸಾಲದ ಶೂಲಕ್ಕೆ ತಳ್ಳಿತು ಎಂದು ಹೂ ಬೆಳೆಗಾರರು ಅವಲತ್ತುಕೊಳ್ಳುತ್ತಿದ್ದಾರೆ.

Advertisement

ಪರಿಹಾರ ಸಿಗಲ್ಲ, ಟ್ರ್ಯಾಕ್ಟರ್‌ನಿಂದ ಬೆಳೆ ನಾಶ: ಈಗಾಗಲೇ ತಾಲೂಕನ್ನು ಬರಪೀಡಿತ ತಾಲೂಕ್ಕಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ, ಹೂ ಕೃಷಿಗೆ ಬರ ಪರಿಹಾರ ಸಿಗುವುದಿಲ್ಲ. ಬಹುತೇಕ ಮಳೆಯಾಶ್ರಿತದಲ್ಲಿ ಕೈಗೊಳ್ಳುವ ಬೆಳೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆದರೆ, ಹೂ ಕೃಷಿ ನೀರಾವರಿ ಆಶ್ರಯದಲ್ಲಿ ಕೈಗೊಳ್ಳುವ ಬೆಳೆಯಾಗಿದೆ. ಕೆಲವು ಮಂದಿ ಮಳೆಯಾಶ್ರಯದಲ್ಲಿ ಕೈಗೊಳ್ಳುತ್ತಾರೆ. ಈ ಹಿಂದೆ ಯಾವುದೇ ಹೂ ಬೆಳೆ ಪರಿಹಾರ ದೊರೆತಿಲ್ಲ. ಇದನ್ನು ಗಮನಿಸಿರುವ ರೈತರು ಹೂ ಬೆಳೆಯನ್ನು ನಾಶಗೊಳಿಸಿ ಪರ್ಯಾಯ ಬೆಳೆಯತ್ತ ಮುಂದಾಗುತ್ತಿದ್ದಾರೆ.

ತಾಲೂಕಿನ ಹಲವು ಗ್ರಾಮಗಳಲ್ಲಿ ಹೂ ಕೃಷಿಯನ್ನೇ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಕೈಗೊಂಡಿದ್ದಾರೆ. ಈ ಬಾರಿ ಬೆಲೆ ಸಿಗದಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ಆಯುಧಪೂಜೆ, ಇತರೆ ಹಬ್ಬಗಳಿಗೆ ಹೂ ಬೆಲೆ ಅಧಿಕಗೊಳ್ಳುವ ಸಾಧ್ಯತೆ ಇದೆ. ಪರ್ಯಾಯ ಬೆಳೆಯತ್ತ ರೈತರು ಆಲೋಚನೆ ಮಾಡಿ ಬೆಳೆ ನಾಶಕ್ಕೆ ಮುಂದಾಗಿರಬಹುದು. ಈ ಬಗ್ಗೆ ಇಲಾಖೆಯ ಹಿರಿಯ ಅ ಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. -ರಾಜೇಶ್‌, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಅರಕಲಗೂಡು.

ರೈತರು ಬೆಳೆದಿದ್ದ ಹೂ ಮಾಲೆಗಳನ್ನು ಕೊಂಡು ಹುಬ್ಬಳ್ಳಿ, ಮಂಗಳೂರು, ಕೇರಳ ಮತ್ತಿತರ ನಗರ ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. ಈಗ ಎಲ್ಲಾ ಕಡೆ ಹೂವಿನ ದರ ಪಾತಾಳಕ್ಕೆ ಕುಸಿದಿದೆ. ಹೂವಿಗೆ ಬೇಡಿಕೆ ಇಲ್ಲದ ಕಾರಣ ಮಾರಾಟ ಸ್ಥಗಿತಗೊಳಿಸಿದ್ದೇನೆ. -ಮಂಜೇಗೌಡ, ಹೂ ಬೆಳೆಗಾರ, ಪಾರಸನಹಳ್ಳಿ

ಸೇವಂತಿ ಹೂ ಒಂದು ಮಾರಿಗೆ 5ರಿಂದ 10 ರೂ.ಗೆ ಮಾರಾಟ ಮಾಡಬೇಕಾಗಿದೆ. ಗಿಡಗಳಲ್ಲಿ ಹೂ ಕೊಯ್ದು ಮಾಲೆ ಕಟ್ಟಲು ತಗಲುತ್ತಿರುವ ಕೂಲಿ ವೆಚ್ಚವೂ ಸಿಗುತ್ತಿಲ್ಲ. ಇದರಿಂದ ಮನನೊಂದು ಬೆಳೆದಿದ್ದ ಹೂ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸುತ್ತಿದ್ದೇನೆ. ಸರ್ಕಾರ ಹೂ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. -ಚಂದ್ರಶೇಖರ್‌. ಬೆಳೆಗಾರ,ದುಮ್ಮಿ ಗ್ರಾಮ.

-ವಿಜಯ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next