Advertisement
ಕೋವಿಡ್ ಸಂಕಷ್ಟದಿಂದಾಗಿ ಈ ವರ್ಷವೂ ಕುಂದಾಪುರ ಭಾಗದ ದೇವಸ್ಥಾನಗಳ ವಾರ್ಷಿಕ ಜಾತ್ರೆ, ದೈವಸ್ಥಾನಗಳ ಕೆಂಡೋತ್ಸವ ಅದ್ದೂರಿಯಾಗಿ ನಡೆಯುವುದು ಅನುಮಾನ ಎನ್ನುವ ಕಾರಣಕ್ಕೆ, ಹೆಚ್ಚು ಹೂವು ಬೆಳೆದಲ್ಲಿ, ಜಾತ್ರೆಗಳಿಗೆ ಅವಕಾಶವಿಲ್ಲವಾದರೆ ನಷ್ಟವಾಗಲಿದೆ ಎನ್ನುವ ಕಾರಣಕ್ಕೆ ಹೆಚ್ಚೆಚ್ಚು ಹೂವು ಬೆಳೆಯುತ್ತಿದ್ದ ಬೆಳೆಗಾರರು ಈ ಬಾರಿ ಕಡಿಮೆ ಬೆಳೆದಿದ್ದಾರೆ.
Related Articles
Advertisement
ಹೆಮ್ಮಾಡಿ, ಕಟ್‌ಬೆಲ್ತೂರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ 50ಕ್ಕೂ ಅಧಿಕ ಮಂದಿ ಹೂವು ಬೆಳೆಯುತ್ತಿದ್ದು, ಈ ಬಾರಿ ಇವರಲ್ಲಿ ಕೆಲವರು ನಿರಾಸಕ್ತಿ ತೋರಿದ್ದಾರೆ.
ಕೆಂಡ ಸೇವೆ- ಜಾತ್ರೆಗಳಿಗೆ ಬಲು ಬೇಡಿಕೆ :
ಹೆಮ್ಮಾಡಿ ಸೇವಂತಿಗೆ ಹೂವಿಗೆ ಕುಂದಾಪುರ ಭಾಗದ ಮಾರಣಕಟ್ಟೆ ಜಾತ್ರೆಯಿಂದ ಆರಂಭಗೊಂಡು, ಉಡುಪಿ, ಮಂಗಳೂರು, ಭಟ್ಕಳ, ಹೊನ್ನಾವರದ ಕೆಂಡ ಸೇವೆ, ವಾರ್ಷಿಕ ಜಾತ್ರೋತ್ಸವಗಳಲ್ಲಿ ಬಲು ಬೇಡಿಕೆಯಿದೆ. ಕುಂದಾಪುರ ಭಾಗದಲ್ಲಿ ಜನವರಿಯಿಂದ ಆರಂಭಗೊಂಡು ಮಾರ್ಚ್‌ವರೆಗೂ ನಿರಂತರವಾಗಿ ದಿನಕ್ಕೆರಡು ದೇವಸ್ಥಾನ, ದೈವಸ್ಥಾನಗಳ ಕೆಂಡ ಸೇವೆ- ಜಾತ್ರೆಗಳಿಗೆ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆಯಿರುವುದು ವಿಶೇಷ. ಈ ಬಾರಿ ಸದ್ಯಕ್ಕೆ 1 ಸಾವಿರ ಹೂಗಳಿಗೆ 200 ರೂ.ನಲ್ಲಿ ಮಾರಾಟವಾಗುತ್ತಿದೆ. ಕಳೆದ ಬಾರಿಯೂ ಈ ಸಮಯ 200 ರಿಂದ 250 ರೂ. ಇತ್ತು. ಇದು ಹೆಚ್ಚು ಆಗಬಹುದು ಅಥವಾ ಕಡಿಮೆಯೂ ಆಗಬಹುದು ಎನ್ನುತ್ತಾರೆ ಬೆಳೆಗಾರರು.
ಈ ಬಾರಿ ಚಳಿ ಕಡಿಮೆಯಾಗಿದ್ದರಿಂದ, ಮೋಡದಿಂದಾಗಿ ಸೇವಂತಿಗೆ ಹೂವಿನ ಬೆಳೆಗೆ ಸಂಕಷ್ಟ ಎದುರಾಗಿತ್ತು. ಆದರೆ ಈಗ ಕೆಲವು ದಿನಗಳಿಂದ ಮಳೆ ಬರುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಹೂವಿಗೆ ಅನುಕೂಲವಾಗಿದೆ. ಈ ಬಾರಿ ಕಡಿಮೆ ಬೆಳೆದಿದ್ದರೂ ಒಳ್ಳೆ ಯ ಬೆಳೆ ಬಂದಿದೆ. ಉತ್ತಮ ಬೆಲೆಯ ನಿರೀಕ್ಷೆಯಿದೆ. ಆದರೆ ಜಾತ್ರೆಗಳಲ್ಲಿ ಜನ ಕಡಿಮೆ ಬರುವುದರಿಂದ ಬೇಡಿಕೆ ಇರುತ್ತೋ ? ಇಲ್ಲವೋ ನೋಡಬೇಕು. – ಪ್ರಶಾಂತ್ ಭಂಡಾರಿ ಹೆಮ್ಮಾಡಿ, ಸೇವಂತಿಗೆ ಬೆಳೆಗಾರರು