Advertisement

ವ್ಯಾಜ್ಯಗಳಿಂದಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆ!

10:05 PM Oct 29, 2020 | mahesh |

ಮಹಾನಗರ: ನಗರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಿವಿಲ್‌ ವ್ಯಾಜ್ಯಗಳಿಂದ ಹಿನ್ನಡೆ ಉಂಟಾಗುತ್ತಿರುವ ಕಾರಣ ಇದೀಗ ಖಾಸಗಿ ಭೂಮಿ-ಕಟ್ಟಡ ಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಕರಾರುಗಳನ್ನು ಪರಸ್ಪರ ಇತ್ಯರ್ಥಪಡಿಸಿ ಕೊಳ್ಳುವುದಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮ ಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಒಟ್ಟು 235 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿಯಿವೆ. ಈ ಪೈಕಿ ಕಟ್ಟಡಗಳಿಗೆ ಸಂಬಂಧಿಸಿದ ವ್ಯಾಜ್ಯಗಳೇ ಅಧಿಕ. ಈ ರೀತಿಯ ವ್ಯಾಜ್ಯಗಳು ನಿರೀಕ್ಷಿತ ಅವಧಿಯೊಳಗೆ ಇತ್ಯರ್ಥಗೊಳ್ಳದ ಕಾರಣ ಹಲವೆಡೆ ಕಟ್ಟಡ ತೆರವು, ರಸ್ತೆ ವಿಸ್ತರಣೆ, ಫ‌ುಟ್‌ಪಾತ್‌, ಒಳಚರಂಡಿ ನಿರ್ಮಾಣ ಮೊದಲಾದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳು
145 ಪ್ರಕರಣಗಳು ಉಚ್ಚ ನ್ಯಾಯಾಲಯದಲ್ಲಿವೆ. 2 ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿವೆ. 2019-20 ಮತ್ತು 2020-21ರಲ್ಲಿ ಇದುವರೆಗೆ 93 ಪ್ರಕರಣಗಳು ಇತ್ಯರ್ಥವಾಗಿವೆ. ಪಾಲಿಕೆ ಪರವಾಗಿ ವಾದಿಸಲು ಜಿಲ್ಲಾ ನ್ಯಾಯಾಲಯದಲ್ಲಿ 8 ಮಂದಿ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಮೂರು ಮಂದಿ ನೇಮಕ ಗೊಂಡಿದ್ದಾರೆ.

ಪರ್ಯಾಯ ವ್ಯವಸ್ಥೆ ಮಾಡಲಿ
ಮಹಾನಗರ ಪಾಲಿಕೆಯು ಕಾಮಗಾರಿಗಳಿಗಾಗಿ ಭೂ ಸ್ವಾಧೀನ, ಕಟ್ಟಡ ತೆರವು ಮಾಡುವ ಸಂದರ್ಭ ನೋಟಿಸ್‌ ನೀಡುವ ಮೊದಲೇ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರಿಗೆ ಸೂಕ್ತ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಆಗ ಜನತೆ ಸ್ಪಂದಿಸುತ್ತಾರೆ ಎನ್ನುತ್ತಾರೆ ನಾಗರಿಕ ಸಮಿತಿಯ ಹನುಮಂತ ಕಾಮತ್‌, ಎಂಸಿಸಿ ಸಿವಿಕ್‌ ಗ್ರೂಪ್‌ನ ಪದ್ಮನಾಭ ಉಳ್ಳಾಲ ಅವರು.

ಟಿಡಿಆರ್‌ಗೆ ಬೆಲೆ ಬರಲಿ
ಜಾಗದ ಮಾಲಕರು ಜಾಗವನ್ನು ಪಾಲಿಕೆಗೆ ನೀಡಿದರೆ ಅದಕ್ಕೆ ಪ್ರತಿಯಾಗಿ ಪಾಲಿಕೆ ಟಿಡಿಆರ್‌ ಪ್ರಮಾಣಪತ್ರ ನೀಡುತ್ತದೆ. ಇದರಿಂದಾಗಿ ಆ ಜಾಗದ ಅಥವಾ ಕಟ್ಟಡದ ಮಾಲಕರಿಗೆ ಪಾಲಿಕೆ ಯಿಂದ ಪ್ರೀಮಿಯಂ ಎಫ್ಎಆರ್‌ ಮತ್ತಿತರ ಪ್ರಯೋಜನಗಳು ದೊರೆಯುತ್ತವೆ. ಈ ಹಿಂದೆ ಇಂತಹ ಪ್ರಯೋಜನ ಪಡೆಯಲು ಟಿಡಿಆರ್‌ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಅದು ಕಡ್ಡಾಯವಾಗಿಲ್ಲ. ಟಿಡಿಆರ್‌ ಕಡ್ಡಾಯ ಮಾಡಿದರೆ ಟಿಡಿಆರ್‌ಗೆ ಬೆಲೆ ಬರುತ್ತದೆ. ಪಾಲಿಕೆಗೆ ಜಾಗ ಬಿಟ್ಟು ಕೊಡುವವರ ಸಂಖ್ಯೆಯೂ ಹೆಚ್ಚಾಗಬಹುದು ಎಂದು ನಾಗರಿಕ ಸಮಿತಿಯ ಹನುಮಂತ ಕಾಮತ್‌ ಅಭಿಪ್ರಾಯಪಡುತ್ತಾರೆ.

Advertisement

ಮನವೊಲಿಕೆಗೆ ಆದ್ಯತೆ
ಅನುದಾನ ಹೊಂದಿಸಿಕೊಂಡರೂ ಹಲವೆಡೆ ತಕರಾರಿನಿಂದಾಗಿ ಕಾಮಗಾರಿ ಆರಂಭಿಸಲು ಅಥವಾ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಹಲವು ವರ್ಷಗಳಿಂದ ಪಾಲಿಕೆಯನ್ನು ಕಾಡುತ್ತಿದೆ. ಮುಂದೆ ಇಂತಹ ಸಮಸ್ಯೆ ಎದುರಾಗಬಾರದು, ಅಭಿವೃದ್ಧಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಪಾಲಿಕೆ ಇದೀಗ ಎಲ್ಲಿ ಈ ರೀತಿಯಲ್ಲಿ ಭೂ ಹಸ್ತಾಂತರಕ್ಕೆ ತಕರಾರು ಎದುರಾಗುತ್ತದೆಯೋ ಅಂತಹ ಪ್ರಕರಣಗಳಲ್ಲಿ ಪರಸ್ಪರ ಮಾತುಕತೆಯೊಂದಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಹೆಚ್ಚಿನ ಪ್ರಾಶಸ್ತ್ಯ ನೀಡಲು ಉದ್ದೇಶಿಸಿದೆ.

ವಿಶ್ವಾಸ ಗಳಿಸಿ ಕೆಲಸ
ಈಗಾಗಲೇ ಪಾಲಿಕೆಯ ಹಲವೆಡೆ ನಾನು ಮತ್ತು ಮೇಯರ್‌ ದಿವಾಕರ್‌ ಪಾಂಡೇಶ್ವರ ಅವರು ಜಾಗ, ಕಟ್ಟಡದ ಮಾಲಕರೊಂದಿಗೆ ಸೌಹಾರ್ದವಾಗಿ ಮಾತುಕತೆ ನಡೆಸಿದ ಪರಿಣಾಮ ಹಲವಾರು ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗಿದೆ. ನ್ಯಾಯಾಲಯಕ್ಕೆ ಹೋಗುವ ಮೊದಲು ಮಾತ್ರವಲ್ಲದೆ ಈಗಾಗಲೇ ನ್ಯಾಯಾಲಯಕ್ಕೆ ಹೋದವರ ಜತೆಗೂ ಮಾತುಕತೆ ನಡೆಸುತ್ತಿದ್ದೇವೆ. ಜನರ ವಿಶ್ವಾಸಗಳಿಸಿ, ಅವರ ಮನವೊಲಿಸಿ ಅವರಿಗೆ ಸಮರ್ಪಕ ಪರ್ಯಾಯ ವ್ಯವಸ್ಥೆ ಮಾಡಿ ಕಾಮಗಾರಿ ನಡೆಸಲು ಆದ್ಯತೆ ನೀಡುತ್ತಿದ್ದೇವೆ. ಹಲವು ಮಂದಿ ಸಹಕರಿಸಿದ್ದಾರೆ. ಮತ್ತಷ್ಟು ಜನರ ಸಹಕಾರ ಬೇಕಿದೆ.
-ವೇದವ್ಯಾಸ ಕಾಮತ್‌, ಶಾಸಕರು

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next