Advertisement

ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

12:53 AM Jun 25, 2024 | Team Udayavani |

ಮಂಗಳೂರು: ಜಿಲ್ಲೆಯ ಜನಧನ್‌ ಖಾತೆದಾರರಿಗೆ ಓವರ್‌ ಡ್ರಾಫ್ಟ್‌ (ಒ.ಡಿ.) ಖಾತೆ ಆರಂಭಿಸಲು ನೀಡಿರುವ ಗುರಿ ಸಾಧನೆಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಹಿನ್ನಡೆ ಅನುಭವಿಸಿರುವ ಬಗ್ಗೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಆನಂದ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣ ದಲ್ಲಿ ಸೋಮವಾರ ಜರಗಿದ ಜಿಲ್ಲಾ ಬ್ಯಾಂಕಿಂಗ್‌ ಅಭಿವೃದ್ಧಿ ಜಿಲ್ಲಾ ಸಮಿತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2023-24ನೇ ಸಾಲಿಗೆ ಒ.ಡಿ. ಖಾತೆ ತೆರೆಯುವುದಕ್ಕೆ ನೀಡಲಾಗಿದ್ದ ಗುರಿ ಸಾಧಿಸುವಲ್ಲಿ ವಿವಿಧ ಬ್ಯಾಂಕ್‌ಗಳು ವಿಫಲವಾಗಿವೆ. ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಜನಧನ್‌ ಖಾತೆ ಇದ್ದರೂ ಕೇವಲ 4,368 ಒ.ಡಿ. ತೆರೆದಿರುವುದು ಕಳಪೆ ಸಾಧನೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದರು.

ಜತೆಗೆ, ಅಟಲ್‌ ಪಿಂಚಣಿ ಯೋಜನೆ ಯಡಿ ಕೇವಲ 39,097 ಖಾತೆಗಳನ್ನು ಜಿಲ್ಲೆಯ ಬ್ಯಾಂಕ್‌ಗಳು ತೆರೆದಿವೆ. ಬ್ಯಾಂಕ್‌ಗಳಿಗೆ ನೀಡಿದ ಗುರಿಯ ಶೇ.76ರಷ್ಟು ಮಾತ್ರ ಪ್ರಗತಿಯಾಗಿದೆ. ಜನರಿಗೆ ಸಿಗಬೇಕಾದ ಸರಕಾರಿ ಸೌಲಭ್ಯ ಕೊಡಿಸುವಲ್ಲಿ ನಿರ್ಲಕ್ಷ್ಯ ಮಾಡುವುದು ಸಲ್ಲದು ಎಂದರು.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ರಾಷ್ಟ್ರೀಯ ಪಟ್ಟಣ ಜೀವನೋಪಾಯ ಯೋಜನೆ ಇತ್ಯಾದಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

Advertisement

ಮೀನುಗಾರ ಮಹಿಳೆಯರಿಗೆ ನೀಡುವ ಗುಂಪು ಸಾಲದ ಬಡ್ಡಿಯನ್ನು ಮೀನುಗಾರಿಕೆ ಇಲಾಖೆ ಫಲಾನು ಭವಿಗಳಿಗೆ ಮರುಪಾವತಿಸುತ್ತದೆ. ಆದರೆ 2018ರಿಂದೀಚೆಗೆ ಯೋಜನೆ ಯಲ್ಲಿ ಬ್ಯಾಂಕ್‌ಗಳು ಕ್ಲೇಮುಗಳನ್ನು ಕಳುಹಿಸದೆ ಇರುವುದರಿಂದ ಬಾಕಿ ಉಳಿದಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ವ್ಯವಹಾರದಲ್ಲಿ ಪ್ರಗತಿ
ಜಿಲ್ಲೆಯಲ್ಲಿ ಕಳೆದ ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,21,618.98 ಕೋ. ರೂ. ಆಗಿದ್ದು ವರ್ಷದಿಂದ ವರ್ಷಕ್ಕೆ ಶೇ.15.80ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕ್‌ಗಳ ಒಟ್ಟು ಠೇವಣಿ 70,986.88 ಕೋ. ರೂ. ಆಗಿದ್ದು, ಶೇ.12.13ರಷ್ಟು ಬೆಳವಣಿಗೆ ಕಂಡಿದೆ. ಒಟ್ಟು ಸಾಲವು 30,632.10 ಕೋ. ರೂ. ಆಗಿದ್ದು, ಶೇ.21.38ರಷ್ಟು ಬೆಳವಣಿಗೆ ಸಾಧಿಸಿವೆ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಶೆಟ್ಟಿ ತಿಳಿಸಿದರು.

ಆದ್ಯತಾ ಮತ್ತು ಆದ್ಯತೇತರ ವಲಯಗಳಲ್ಲಿ 47,210.36 ಕೋ. ರೂ. ಸಾಲ ವಿತರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 14,710.45 ಕೋ. ರೂ. ಸಾಲ ವಿತರಿಸಿದ್ದು, ವಾರ್ಷಿಕ ಗುರಿಯಾದ 8,690.00 ಕೋ. ರೂ. ಮೀರಿ ಶೇ. 169.28ರಷ್ಟು ಸಾಧಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ 6,263.92 ಕೋ.ರೂ., ಶಿಕ್ಷಣಕ್ಕೆ 119.40 ಕೋ. ರೂ., ಗೃಹಸಾಲ ಕ್ಷೇತ್ರದಲ್ಲಿ 432.04 ಕೋ. ರೂ. ಸಾಲ ನೀಡಿದ್ದು, ವಾರ್ಷಿಕ ಗುರಿ ಯಾದ 1,462.50 ಕೋ. ರೂ.ಯ ಶೇ.29.54ರಷ್ಟು ನಿರ್ವಹಣೆ ತೋರಿದೆ ಎಂದು ಹೇಳಿದರು.

ಕೃಷಿ ಸಾಲದ ಅರ್ಜಿ ತಿರಸ್ಕರಿಸಬೇಡಿ: ಆರ್‌ಬಿಐ ಅಧಿಕಾರಿ
ಕೃಷಿ ಸಾಲ ಪಡೆಯುವ ರೈತರ ಅರ್ಜಿಯನ್ನು ತಿರಸ್ಕರಿಸಬೇಡಿ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮ್ಯಾನೇಜರ್‌ ವೆಂಕಟರಾಮಯ್ಯ ಟಿ.ಎನ್‌. ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಇದು ಅತ್ಯಗತ್ಯ. ರೈತರು ಖಾಸಗಿ ಲೇವಾದೇವಿ ದಾರರಿಂದ ಅಧಿಕ ಬಡ್ಡಿದರಕ್ಕೆ ಸಾಲ ಪಡೆದು ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಬಹಳಷ್ಟು ಉದಾಹರಣೆಗಳಿವೆ. ಡಿಸೆಂಬರ್‌ ಅಂತ್ಯದವರೆಗಿನ ವರದಿ ಪ್ರಕಾರ, ರಾಜ್ಯದಲ್ಲಿ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ 354 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದವರು ಬ್ಯಾಂಕ್‌ಗಳಿಂದ ಸಾಲ ಪಡೆದಿಲ್ಲ ಎಂಬ ಕಾರಣಕ್ಕೆ ಪರಿಹಾರವೇ ದೊರೆತಿಲ್ಲ. ಬ್ಯಾಂಕ್‌ಗಳು ರೈತರಿಗೆ ಆದ್ಯತೆ ನೆಲೆಯಲ್ಲಿ ಸಾಲ ನೀಡಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next