ನವದೆಹಲಿ:ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವಿವಾರ(ಮಾರ್ಚ್ 28) ಅಂಕಿತ ಹಾಕುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಹಿನ್ನಡೆಯಾಗಿದೆ.
ಇದನ್ನೂ ಓದಿ:ವಿಟ್ಲ: ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!
ಮಸೂದೆ ಪ್ರಕಾರ, ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ ಅಂದರೆ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರ ನೀಡುವುದಾಗಿದೆ. ಮಸೂದೆಯಂತೆ ದೆಹಲಿ ಮುಖ್ಯಮಂತ್ರಿಗಿಂತ ಹೆಚ್ಚಿನ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರದ್ದಾಗಿದ್ದು, ಯಾವುದೇ ಯೋಜನೆ ಜಾರಿಗೊಳಿಸಬೇಕಾದರೂ ಲೆಫ್ಟಿನೆಂಟ್ ಗವರ್ನರ್ ಅನುಮತಿ ಕಡ್ಡಾಯವಾಗಿರುತ್ತದೆ.
ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಮಸೂದೆ 2021ಕ್ಕೆ ಲೋಕಸಭೆಯಲ್ಲಿ ಮಾರ್ಚ್ 22ರಂದು ಅಂಗೀಕಾರ ದೊರಕಿದ್ದು, ಮಾರ್ಚ್ 24ರಂದು ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತ್ತು ಎಂದು ವರದಿ ತಿಳಿಸಿದೆ.
ಈ ತಿದ್ದುಪಡಿ ಮಸೂದೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಭಾರತೀಯ ಜನತಾ ಪಕ್ಷದ ಪ್ರಹಾರವಾಗಿದೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ ಕೇಂದ್ರ ಸರ್ಕಾರ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, ಇದು ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆದ ಅಧಿಕಾರ ವ್ಯಾಪ್ತಿಯ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ 2018ರ ಜುಲೈನಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡಿದೆ.