ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿದೆ. ಈ ವಿಚಾರದ ಬಗ್ಗೆ ಈಗಲೇ ತೀರ್ಮಾನ ಮಾಡದಂತೆ ಕೇಂದ್ರ ಬಿಜೆಪಿ ನಾಯಕರು ಸೂಚಿಸಿದ ಕಾರಣ ಈ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆಸಲಾಗಿಲ್ಲ.
ಲಿಂಗಾಯತ ವೀರಶೈವ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿ (ಓಬಿಸಿ) ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ಬಿಎಸ್ ವೈ ಚಿಂತಿಸಿದ್ದರು. ಆದರೆ ಕೇಂದ್ರ ಬಿಜೆಪಿ ನಾಯಕರು ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ಆತುರದ ತೀರ್ಮಾನ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ.
ಲಿಂಗಾಯತ ವೀರಶೈವ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಬೇರೆ ಸಮುದಾಯಗಳೂ ಬೇಡಿಕೆಯಿಡುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ದೆಹಲಿಯ ಬಿಜೆಪಿ ನಾಯಕರು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮೀಸಲಾತಿ ವಿಚಾರದಲ್ಲಿ ತೀರ್ಮಾನ ಮಾಡಲಾಗುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದೇ ವಿಚಾರವಾಗಿ ಸಚಿವ ಸಂಪುಟ ಸಭೆಯ ನಂತರದ ಸಿಎಂ ಬಿಎಸ್ ಪತ್ರಿಕಾಗೋಷ್ಠಿ ರದ್ದು ಮಾಡಲಾಯಿತು. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ:ನೂತನ ವಿಜಯನಗರ ಜಿಲ್ಲೆಗೆ ಆರು ತಾಲೂಕುಗಳು ಸೇರ್ಪಡೆ: ಹೊಸಪೇಟೆ ಜಿಲ್ಲಾಕೇಂದ್ರ
ವೀರಶೈವ ಮೀಸಲಾತಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಕೇಂದ್ರಕ್ಕೆ ಶಿಫಾರಸು ಮಾಡುವುದು ಮಾತ್ರ. ಒಕ್ಕಲಿಗ ಕುಂಚಿಟಿಗ ಸೇರಿ ಇತರೆ ಸಮುದಾಯದ ಬೇಡಿಕೆಯೂ ಇರುವುದರಿಂದ ಒಟ್ಟಿಗೆ ಸಮಾಲೋಚನೆ ನಡೆಸಿ ಕಳುಹಿಸಲು ತೀರ್ಮಾನ ಮಾಡಲಾಗುವುದು, ಹೀಗಾಗಿ ಸಂಪುಟದಲ್ಲಿ ಈ ವಿಚಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಕಾನೂನು ಸಚಿವ ಮಧುಸ್ವಾಮಿ ಸಮಜಾಯಿಷಿ ನೀಡಿದರು.