ಗಜೇಂದ್ರಗಡ: ಜಿಲ್ಲೆಯ ಸಸ್ಯಕಾಶಿ ಕಪ್ಪತಗುಡ್ಡದಲ್ಲಿ ರಾಜ್ಯ ಸರ್ಕಾರ ಆಯುರ್ವೇದ ಸಂಶೋಧನಾ ಕೇಂದ್ರ ತೆರೆಯುವ ಮೂಲಕ ಆಯುರ್ವೇದಿಕ್ ವಿದ್ಯಾರ್ಥಿಗಳ ಹೆಚ್ಚಿನ ಸಂಶೋಧನೆಗೆ ಅವಕಾಶ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಒತ್ತಾಯಿಸಿದರು.
ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ನಡೆದ ಭಗವಾನ್ ಮಹಾವೀರ ಜೈನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಘಟಿಕೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಪದ್ಧತಿ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಇದರ ಭಾಗವಾಗಿ ರಾಜ್ಯ ಸರ್ಕಾರ ಆಯುರ್ವೇದ ಮಹಾವಿದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಶಿವಮೊಗ್ಗದಲ್ಲಿ ಈ ವಿಶ್ವವಿದ್ಯಾಯ ಸ್ಥಾಪನೆಗೆ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಆದರೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಆಯುರ್ವೇದಿಕ ಸಸ್ಯ ಪ್ರಭೇದಗಳನ್ನು ಹೊಂದಿರುವ ಕಪ್ಪತಗುಡ್ಡ ಆಯುರ್ವೇದಿಕ್ ತಜ್ಞರ ಕೇಂದ್ರ ಸ್ಥಳದಂತಿದೆ ಎಂದರು.
ರಾಜ್ಯ ಸರ್ಕಾರ ಈ ಭಾಗದಲ್ಲಿ ಆಯುರ್ವೇದಿಕ ಪದ್ಧತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಸ್ಯಕಾಶಿ ಕಪ್ಪತಗುಡ್ಡದಲ್ಲಿ ಆಯುರ್ವೇದಿಕ ಸಂಶೋಧನಾ ಕೇಂದ್ರ ಸ್ಥಾಪನೆಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇದರಿಂದ ಆಯುರ್ವೇದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಶೋಧನೆ ನಡೆಸಲು ಅನುಕೂಲವಾಗಲಿದೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಅಲೋಪತಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಹಿಂದೆ ಗತವೈಭವ ಮೆರೆದ ಆಯುರ್ವೇದ ಪದ್ಧತಿಗೆ ಏಕೆ ಹಿನ್ನಡೆಯಾಗಿದೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಋಷಿ ಮುನಿಗಳು ಹಿಂದೆ ಮಾಡಿದ ಅಧ್ಯಯನದ ಬಗ್ಗೆ ದಾಖಲೆಗಳಿಲ್ಲದಿರುವುದೇ ಈ ಹಿನ್ನಡೆಗೆ ಕಾರಣ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯುರ್ವೇದ ಪದ್ಧತಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಿವೆ. ದೇಶದಲ್ಲಿನ ಆಯುರ್ವೇದ ಸಸ್ಯಗಳ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಪ್ರಾಥಮಿಕ, ಪ್ರೌಢಶಾಲೆ ಪಠ್ಯಕ್ರಮದಲ್ಲಿ ಆಯುರ್ವೇದ ವಿಷಯ ಅಳವಡಿಸಿದಾಗ ಮಾತ್ರ ಆಯುರ್ವೇದ ಪದ್ಧತಿ ಉಳಿಯಲು ಸಾಧ್ಯ ಎಂದರು.
ಮೆಡಿಕಲ್ ಕಾಲೇಜು ಕಾರ್ಯದರ್ಶಿ ಅಜೀತ ಬಾಗಮಾರ ಮಾತನಾಡಿ, ವಿದ್ಯಾರ್ಥಿಗಳು ಅಹಂ ಬಿಟ್ಟು ವಿದ್ಯೆಗೆ, ಗುರುವಿಗೆ ತಲೆಬಾಗಬೇಕು. ಕಲಿಕೆಗೆ ಕೊನೆಯಿಲ್ಲ. ಗುರುವಿಗೆ ಭೇದವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಸಮಾಜದಲ್ಲಿ ನಿಮ್ಮ ಅಗತ್ಯತೆ ಇದ್ದ ಸಂದರ್ಭದಲ್ಲಿ ಅಂದು ನಿಮ್ಮ ಸೇವೆ ನೀಡಬೇಕು. ಅದನ್ನು ಬಿಟ್ಟು ವೈದ್ಯಕೀಯ ವೃತ್ತಿ ಫ್ಯಾಷನ್‌ಗೆ ಬಳಸಿಕೊಳ್ಳಬೇಡಿ. ಹಾಗೆ ಮಾಡುವುದರಿಂದ ವೃತ್ತಿಗೆ ಅಗೌರವ ತೋರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಭವಿಷ್ಯದ ಸಮಾಜ ನಿರ್ಮಾತೃಗಳು ನೀವಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾಲೇಜು ಅಧ್ಯಕ್ಷ ಅಶೋಕ ಬಾಗಮಾರ, ಪ್ರಾಚಾರ್ಯ ಎ. ಎಸ್. ಪ್ರಶಾಂತ್, ಯು.ವಿ. ಪುರದ, ರಿಕಬಚಂದ್ ಬಾಗಮಾರ, ತಾರಾಬಾಯಿ ಬಾಗಮರ, ವರ್ಧಮಾನ ಬಾಗಮಾರ, ಡಾ|ಎನ್.ಎಚ್. ಕುಲಕರ್ಣಿ ಇನ್ನಿತರರಿದ್ದರು.