Advertisement
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಎಚ್.ವಿಶ್ವನಾಥ್ ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಅವರು, ಹಾಗೊಂದು ವೇಳೆ ನೀವು ಬಂದು ಸುಳ್ಳು ಪ್ರಮಾಣ ಮಾಡಿದರೆ ದೇವರು ನೋಡಿಕೊಳ್ಳುತ್ತಾರೆ ಎಂದರು.
Related Articles
Advertisement
ರಿಯಲ್ ಎಸ್ಟೇಟ್ ಮಾಡ್ತೇನೆ: ಹೌದು, ನಾನು ಬದುಕಿಗಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತೇನೆ. ಯಾರಿಗೂ ಮೋಸ ಮಾಡಿಲ್ಲ, ಅದು ಎಲ್ಲರಿಗೂ ಗೊತ್ತಿದೆ. ರಾಜಕಾರಣವನ್ನೇ ನಾನು ಉದ್ಯಮವಾಗಿಸಿಕೊಂಡಿಲ್ಲ. ಈವರೆಗೆ ವರ್ಗಾವಣೆಗಾಗಲಿ, ಗುತ್ತಿಗೆದಾರರಿಂದಾಗಲಿ ಹಣ ಪಡೆದಿದ್ದರೆ ಹೇಳಲಿ ಎಂದು ಪ್ರಶ್ನಿಸಿದ ಅವರು, ಕಳೆದ 14 ತಿಂಗಳಲ್ಲಿ ನಾನು ಯಾರಿಗೆ ಸಹಾಯ ಮಾಡಿದೆ ಎಂಬುದು ಗೊತ್ತಿಲ್ವಾ?
ನಾನು ಕಷ್ಟದಲ್ಲಿದ್ದೀನಿ ನನ್ನ ಮಗ ಹೋಗಿ ಭೇಟಿ ಮಾಡ್ತಾನೆ ತಲುಪಿಸಲು ಹೇಳಪ್ಪಾ ಅನ್ನಲಿಲ್ವಾ ನೀವು? ಎಷ್ಟು ಸುಳ್ಳು ಹೇಳುತ್ತೀರಿ? ಮನಸಾಕ್ಷಿ ಇಲ್ಲವಾ ನಿಮಗೆ ಎಂದು ಪ್ರಶ್ನಿಸಿದರು. ಕೆ.ಆರ್.ನಗರಕ್ಕೆ ರಾಹುಲ್ ಗಾಂಧಿ ಬಂದಾಗ ಸಿದ್ದರಾಮಯ್ಯ ಇರುವ ಕಡೆ ನಾನು ಬರುವುದಿಲ್ಲ ಅಂದವರು ಮಾಧ್ಯಮಗಳ ಮುಂದೆ ನನ್ನನ್ನು ಕರೆಯಲೇ ಇಲ್ಲ ಎನ್ನುತ್ತೀರಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಬಂದಾಗ ನನಗಿಂತ ಸಿದ್ದರಾಮಯ್ಯಗೆ ಹೆಚ್ಚು ಜೈಕಾರ ಕೂಗ್ತಾವ್ರೆ ಅನ್ನಲಿಲ್ವಾ ನೀವು ಎಂದು ಜರಿದರು.
ವ್ಯಭಿಚಾರಿ: ಎಚ್.ವಿಶ್ವನಾಥ್ ರಾಜಕಾರಣದ ವ್ಯಭಿಚಾರಿ, ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಜರಿದ ಸಾ.ರಾ.ಮಹೇಶ್, ನಿಷ್ಠೆ, ಪ್ರಾಮಾಣಿಕತೆ, ನಿಯತ್ತು ಇರೋದೇ ತಪ್ಪಾ? ನಿಮ್ಮ ಜೀವನ ಚರಿತ್ರೆಯನ್ನೂ ಬರೆಯಿರಿ, ನನ್ನ ಜೀವನ ಚರಿತ್ರೆಯನ್ನು ಬರೆಯುತ್ತೇನೆ ಚರ್ಚೆಯಾಗಲಿ, ಜನ ತೀರ್ಮಾನ ಮಾಡುತ್ತಾರೆ ಎಂದರು.
ಈ ಭಾಗದಲ್ಲಿ ದಾಖಲೆಯ ಗೆಲುವು: 2008ರಲ್ಲಿ ನಿಮ್ಮ ವಿರುದ್ಧವೇ ಕೆ.ಆರ್.ನಗರ ಕ್ಷೇತ್ರದ ಜನತೆ ನನ್ನನ್ನು 20,548 ಮತಗಳ ಅಂತರದಿಂದ ಗೆಲ್ಲಿಸಿದ್ದರು. 2013ರಲ್ಲಿ 16 ಸಾವಿರ ಮತಗಳ ಅಂತರದಿಂದ ಮತ್ತೆ ಗೆಲ್ಲಿಸಿದ್ದರು. ನಿಮ್ಮನ್ನು ಜೆಡಿಎಸ್‌ಗೆ ಕರೆತಂದ ಪರಿಣಾಮ 2018ರ ಚುನಾವಣೆಯಲ್ಲಿ ನಾನು ಗೆದ್ದಿದ್ದು 1,850 ಮತಗಳ ಅಂತರದಿಂದ, ಸಿದ್ದರಾಮಯ್ಯ ಅವರೂ ಸೇರಿದಂತೆ ಈ ಭಾಗದಲ್ಲಿ ಯಾರೂ ಜೆಡಿಎಸ್‌ನಿಂದ ಸತತ ಮೂರು ಬಾರಿ ಆಯ್ಕೆಯಾಗಿಲ್ಲ. ಕೆ.ಆರ್.ನಗರ ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಗೆಲ್ಲಿಸಿದ್ದಾರೆ. ನಿಮ್ಮ ಆತ್ಮಸಾಕ್ಷಿಗೆ ಸುಳ್ಳು ಹೇಳಬೇಡಿ, ನೊಂದು ಹೇಳುತ್ತಿದ್ದೇನೆ ಎಂದರು.
ಎದುರಿಗೆ ಕೂರಿಸಿಕೊಂಡು ಹೇಳುವುದು ಬಹಳಷ್ಟಿದೆ: ನನ್ನ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ದೇವರ ಮುಂದೆ ಪ್ರಮಾಣ ಮಾಡಲಿ ಎಂದಿದ್ದಾರೆ. ಜೊತೆಗೆ ಪತ್ರಿಕಾ ಭವನದಲ್ಲಿ ಚರ್ಚೆಗೆ ಬನ್ನಿ ಎಂದಿದ್ದಾರೆ. ಅವರ ಈ ನಾಲ್ಕೂ ಸವಾಲು ಸ್ವೀಕರಿಸಲು ಸಿದ್ಧನಿದ್ದೇನೆ. ಹಿರಿಯರಾದ ಅವರೇ ಚರ್ಚೆಗೆ ದಿನಾಂಕ ನಿಗದಿಪಡಿಸಲಿ, ಅವರನ್ನೇ ಎದುರಿಗೆ ಕೂರಿಸಿಕೊಂಡು ಹೇಳುವುದು ಬಹಳಷ್ಟಿದೆ, ಯಾವ್ಯಾವ ದಿನ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದೀರಿ,
ಹಾಗೆ ಭೇಟಿ ಮಾಡಿದ್ದು ರಾಜ್ಯದ ಜನರ ಅಭಿವೃದ್ಧಿಗಾಗಿ ಸಲಹೆ ನೀಡಲೋ, ನಿಮ್ಮ ವೈಯಕ್ತಿಕ ಕೆಲಸಗಳಿಗಾಗಿಯೋ? ನನ್ನ ಜೊತೆ ಏನೇನೂ ಮಾತನಾಡಿದ್ದೀರಿ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಸಾ.ರಾ.ಮಹೇಶ್ ತಿಳಿಸಿದರು. ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾಗಿದ್ದವರು ನಮ್ಮ ಪಕ್ಷಕ್ಕೆ ಸೇರಿದಾಗ ಸ್ವಾಗತ ಮಾಡಿದ ತಪ್ಪಿಗೆ ನಿಂದನೆಗಳನ್ನು ಕೇಳಬೇಕಾಗಿ ಬಂದಿದೆ. ಅವರ ನುಡಿ ಒಂದು-ನಡೆ ಒಂದು ಎಂಬುದು ರಾಜ್ಯದ ಜನರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಸದನದಲ್ಲಿ ಅವರ ಬಗ್ಗೆ ಮಾತನಾಡಿದ್ದೆ ಎಂದರು.