Advertisement

Session; ಈಡೇರದ ಆಶಯ: ಈ ಬಾರಿಯೂ ಉತ್ತರ ಕರ್ನಾಟಕದ ಸಮಸ್ಯೆಗೆ ಸಿಕ್ಕಿಲ್ಲ ಅಭಯ

11:54 PM Dec 08, 2023 | Team Udayavani |

ಬೆಳಗಾವಿ: ಬರ, ನೀರಾವರಿ ಸಹಿತ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದ ಬಗ್ಗೆ ಸಾಕಷ್ಟು ನಿರೀಕ್ಷೆ ಯೊಂದಿಗೆ ಪ್ರಾರಂಭವಾದ ಬೆಳಗಾವಿ ಅಧಿವೇಶನದ ಮೊದಲ ವಾರ ಪ್ರತಿ ಬಾರಿಯಂತೆ ಅನಪೇಕ್ಷಿತ ಚರ್ಚೆ ಹಾಗೂ ವಾಗ್ವಾದದಲ್ಲೇ ಕೊನೆಯಾಗಿದೆ.

Advertisement

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ರಾಜಕೀಯ ಅನ್ಯಾಯದ ಬಗ್ಗೆ ಈ ಸದನದಲ್ಲಿ ಚರ್ಚಿಸುವುದಕ್ಕೆ ಅವಕಾಶ ನೀಡಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅಧಿವೇಶನದ ಮೊದಲ ದಿನವೇ ಒತ್ತಾಯಿಸಿದ್ದರು. ಈ ಬಗ್ಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ಯು.ಟಿ.ಖಾದರ್‌ ಭರವಸೆ ನೀಡಿದ್ದರು. ಆದರೆ ಮೊದಲ ವಾರ ಈ ಬಗ್ಗೆ ಚರ್ಚೆಯಾಗಿಲ್ಲ. ಬರದ ಬಗ್ಗೆ ವಿಪಕ್ಷ ನಾಯಕ ಆರ್‌.ಅಶೋಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಿತ ಹಲವರು ಪ್ರಸ್ತಾವಿಸಿದ್ದರೂ ಅಭಿವೃದ್ಧಿಗೆ ಹೊರತಾದ ವಿಚಾರಗಳೇ ಹೆಚ್ಚು ವಿಜೃಂಭಿಸಿವೆ.
ಮೊದಲ ಎರಡು ದಿನ ಸಪ್ಪೆ ಎನಿಸಿದ ಅಧಿವೇಶನಕ್ಕೆ ಸ್ವಲ್ಪ ಬಿರುಸು ನೀಡಿದವರೇ ಕರಾವಳಿ ಭಾಗದ ಶಾಸಕರು. ಮೂರನೇ ದಿನದಿಂದ ಕಲಾಪದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡ ವಿ.ಸುನೀಲ್‌ ಕುಮಾರ್‌, ಭರತ್‌ ಶೆಟ್ಟಿ, ವೇದವ್ಯಾಸ್‌ ಕಾಮತ್‌, ಹರೀಶ್‌ ಪೂಂಜ, ಉಮಾನಾಥ್‌ ಕೋಟ್ಯಾನ್‌, ರಾಜೇಶ್‌ ನಾೖಕ್‌ ಮುಂತಾದವರು ಅರಣ್ಯ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ದಾಖಲಿಸಿದ ಎಫ್ಐಆರ್‌ ಬಗ್ಗೆ ಕಲಾಪದಲ್ಲಿ ಪ್ರಸ್ತಾವಿಸಿ ಧರಣಿ ನಡೆಸಿದ್ದರಿಂದ ಆಡಳಿತ-ವಿಪಕ್ಷದ ಮಧ್ಯೆ ಕಿಚ್ಚು ಕಾಣಿಸಿಕೊಂಡಿತು. ಅಲ್ಲಿಂದ ಮುಂದೆ ದಿನಕ್ಕೊಂದು ವಿಚಾರಗಳು ಸದನದಲ್ಲಿ ಮೊಳಗುತ್ತಿದೆಯಾದರೂ ಅಭಿವೃದ್ಧಿ ವಿಚಾರಗಳು ಸಪ್ಪೆಯಾಗಿವೆ. ಮುಂದಿನ ವಾರ ನೀರಾವರಿ ಯೋಜನೆಗಳು ಸಹಿತ ಹಲವು ವಿಚಾರಗಳ ಬಗ್ಗೆ ಪ್ರಸ್ತಾವಿಸಲು ಅವಕಾಶ ನಿಡುವುದಾಗಿ ಸ್ಪೀಕರ್‌ ಭರವಸೆ ನೀಡಿದ್ದಾರೆ.

ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ
ಉತ್ತರ ಕರ್ನಾಟಕದಲ್ಲಿ ಕಲಾಪ ನಡೆಯುತ್ತಿದ್ದರೂ ಸಚಿವ ಸಂಪುಟ ಸಭೆಯಲ್ಲೂ ಈ ಭಾಗಕ್ಕೆ ಸಂಬಂಧಪಟ್ಟ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅಸ್ತು ಎಂದಿದ್ದನ್ನು ಬಿಟ್ಟರೆ ಈ ಭಾಗಕ್ಕೆ ಮಹತ್ವ ಎನಿಸುವ ಯಾವುದೇ ಘೋಷಣೆಯಾಗಿಲ್ಲ. ಪ್ರತಿಭಟನೆಯ ಬಿಸಿ ಸುವರ್ಣ ವಿಧಾನಸೌಧದವರೆಗೆ ವ್ಯಾಪಿಸದೇ ಇರುವುದು ಈ ಬಾರಿಯ ವಿಶೇಷ.

ವಿಧಾನ ಪರಿಷತ್ತಿನಲ್ಲಿ ಎನ್‌ಇಪಿಗೆ ಸಂಬಂಧಪಟ್ಟಂತೆ ಶುಕ್ರವಾರ ಮಹತ್ವದ ಚರ್ಚೆ ನಡೆದಿದ್ದು, ಉನ್ನತ ಶಿಕ್ಷಣ ಸಚಿವ ಡಾ| ಸುಧಾಕರ್‌ ಉತ್ತರ ನೀಡಿದ್ದಾರೆ. ಸಾವರ್ಕರ್‌ ಫೋಟೋ ತೆರವು ವಿಚಾರ ಬಿಸಿ ಹೊತ್ತಿಕೊಳ್ಳುವ ಮುನ್ಸೂಚನೆ ಕಂಡರೂ ಸ್ಪೀಕರ್‌ ಯು.ಟಿ.ಖಾದರ್‌ ಸಮಯೋಚಿತ ನಿಲುವು ತೆಗೆದುಕೊಳ್ಳುವ ಮೂಲಕ ವಿವಾದ ಕಲಾಪವನ್ನು ಬಲಿ ತೆಗೆದುಕೊಳ್ಳುವುದನ್ನು ತಪ್ಪಿಸಿದ್ದಾರೆ.

ಕಲಾಪಕ್ಕೆ ಶಾಸಕರ ಗೈರು
ಶುಕ್ರವಾರ ಸಮೀಪಿಸುತ್ತಿದ್ದಂತೆ ವಿಧಾನಸಭೆ ಕಲಾಪಕ್ಕೆ ಶಾಸಕರ ಗೈರು ಕಾಣಿಸಿಕೊಂಡಿದೆ. ಇದೆಲ್ಲದರ ಮಧ್ಯೆ ಸಚಿವರೂ ಸದನಕ್ಕೆ ಗೈರಾಗುತ್ತಿರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ಸಚಿವರ ಗೈರು, ವಿಪಕ್ಷದ ತರಾಟೆ ಎಂಬುದು ಕಲಾಪದ ಸತ್ಸಂಪ್ರದಾಯವೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸಭಾಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕೆಂಬುದು ಹಿರಿಯ ಶಾಸಕರ ಬೇಡಿಕೆಯಾಗಿದೆ.

Advertisement

ನಿಲ್ಲದ ಗೊಂದಲ
ಇವೆಲ್ಲದರ ಮಧ್ಯೆ ವಿಪಕ್ಷ ಪಾಳಯದ ಗೊಂದಲ ಮಾತ್ರ ಮುಂದುವರಿದಿದೆ. “ಎಲ್ಲರೂ ನಾಯಕರು’ ಎಂಬಂತೆ ವರ್ತಿಸುತ್ತಿದ್ದು, ವಿಜಯೇಂದ್ರ ಬಣ, ಅಶೋಕ ಬಣ, ಸುನಿಲ್‌ ಕುಮಾರ್‌ ಬಣ, ಯತ್ನಾಳ್‌ ಬಣ ಎದ್ದು ಕಾಣುತ್ತಿದೆ. ಗುರುವಾರ ಈ ಗೊಂದಲ ಸ್ಫೋಟಗೊಂಡಿದ್ದು, ಹೊಂದಾಣಿಕೆ ಮೂಡಿಸುವ ಹೊಣೆ ಯಾರದು ಎಂಬ ಪ್ರಶ್ನೆ ಉದ್ಭವವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next