ಬೆಳಗಾವಿ: ಚಳಿಗಾಲ ಅಧಿವೇಶನದಕ್ಕೆ ಖರ್ಚು ವೆಚ್ಚ ಕಡಿತಗೊಳಿಸುವುದರ ಜತೆಗೆ ದಾಖಲೆಗಳು ಸೇರಿ ಎಲ್ಲವೂ ಪಾರದರ್ಶಕವಾಗಿ ಇರಬೇಕು ಎಂದು ಅಧಿವೇಶನದ ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡ ಹಿರಿಯ ಐಎಎಸ್ ಅಧಿಕಾರಿ ಉಜ್ವಲ್ ಘೋಷ್ ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ಅಧಿವೇಶನ ಸಿದ್ಧತೆಗೆ ಅವಧಿ ಕಡಿಮೆಯಿದ್ದು, ತಕ್ಷಣ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳ ತಂಡ ರಚಿಸಿಕಾರ್ಯಪ್ರವೃತ್ತರಾಗಬೇಕು. ಅಗತ್ಯವಿರುವ ಸಲಕರಣೆ-ಸಾಮಗ್ರಿಗಳ ಪಟ್ಟಿ ಮಾಡಿಕೊಳ್ಳಬೇಕು ಎಂದರು.
ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಮಾತನಾಡಿ, ಕಳೆದ ಬಾರಿ ಅಧಿವೇಶನದ ಸಂಪೂರ್ಣ ಉಸ್ತುವಾರಿಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಕಾರ್ಯದರ್ಶಿಗಳೇ ವಹಿಸಿದ್ದರು. ಈ ಬಾರಿ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಹೀಗಾಗಿ ಪ್ರತಿ ಅಧಿಕಾರಿ ತಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ಈ ಬಾರಿ ಅಧಿವೇಶನದ ಸಂಪೂರ್ಣ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಪ್ರತಿ ಸಲದಂತೆ ಊಟ, ವಸತಿ, ಸಾರಿಗೆ, ಶಿಷ್ಟಾಚಾರ ಮತ್ತಿತರ ಕೆಲಸ ಕಾರ್ಯಗಳ ಸುಗಮ ನಿರ್ವಹಣೆಗೆ ಅಗತ್ಯವಿರುವ ಸಮಿತಿ ರಚಿಸಲಾಗುವುದು.
ವಿಧಾನಸಭಾ ಅಧ್ಯಕ್ಷರು ಮತ್ತು ಪರಿಷತ್ ಸಭಾಪತಿ ಅವರ ಆಶಯದಂತೆ ಖರ್ಚು ವೆಚ್ಚ ಕಡಿತಗೊಳಿಸುವುದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದರು.