Advertisement

ಇಂದಿನಿಂದ ಅಧಿವೇಶನ: ರಚನಾತ್ಮಕವಾದ ಚರ್ಚೆಯಾಗಲಿ

12:16 AM Dec 07, 2022 | Team Udayavani |

ಬುಧವಾರ ಸಂಸತ್‌ ಅಧಿವೇಶನ ಆರಂಭವಾಗಲಿದ್ದು, ಬೆಲೆ ಏರಿಕೆ, ಗಡಿಯಲ್ಲಿ ಚೀನ ಉದ್ಧಟತನ, ಕೇಂದ್ರದಿಂದ ಸರಕಾರಿ ಸಂಸ್ಥೆಗಳ ದುರುಪಯೋಗ ಆರೋಪ ಸಹಿತ ಹಲವಾರು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಡಿ.7ರಂದು ಆರಂಭವಾಗಲಿರುವ ಅಧಿವೇಶನ, ಡಿ.29ಕ್ಕೆ ಮುಗಿಯಲಿದೆ. ಒಟ್ಟಾರೆಯಾಗಿ 17 ದಿನಗಳ ಕಾಲ ಅಧಿವೇಶನ ನಡೆಯಲಿದೆ.

Advertisement

ಹಾಗೆಯೇ ಕೇಂದ್ರ ಸರಕಾರ ಒಟ್ಟು ಹೊಸದಾಗಿ 16 ಹೊಸ ಮಸೂದೆಗಳನ್ನು ಮಂಡಿಸಲು ಮುಂದಾಗಿದೆ. ಜತೆಗೆ ಹಿಂದಿನ ಮಸೂದೆಗಳ ಸಹಿತ ಒಟ್ಟು 25 ಮಸೂದೆಗಳಿಗೆ ಅಂಗೀಕಾರ ಪಡೆಯುವ ಉದ್ದೇಶ ಇರಿಸಿಕೊಂಡಿದೆ. ಕೇವಲ 17 ದಿನಗಳ ಅಧಿವೇಶನದಲ್ಲಿ ಈ ಪ್ರಮಾಣದ ಮಸೂದೆಗಳಿಗೆ ಅಂಗೀಕಾರ ಪಡೆಯುವ ಅಗತ್ಯವಾದರೂ ಏನಿದೆ ಎಂಬುದು ವಿಪಕ್ಷಗಳ ಪ್ರಶ್ನೆ. ಏಕೆಂದರೆ ವಿಪಕ್ಷಗಳ ಪ್ರಕಾರ ಯಾವುದೇ ಮಸೂದೆ ಅಂಗೀಕಾರವಾಗುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಈ ಬಗ್ಗೆ ಸಂಸತ್‌ನ ಸ್ಥಾಯಿ ಸಮಿತಿಗಳಿಗೆ ಹೋಗಿ, ಅಲ್ಲಿ ಒಂದು ಪರಿಷ್ಕರಣೆ ನಡೆಯಬೇಕು. ಇದಾದ ಬಳಿಕವಷ್ಟೇ ಮಸೂದೆಗಳಿಗೆ ಅನುಮೋದನೆ ಪಡೆಯಬೇಕು ಎಂಬುದು ವಿಪಕ್ಷಗಳ ಅಭಿಪ್ರಾಯ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿಲ್ಲ. ಸರಕಾರ ಹೇಳುವ ಪ್ರಕಾರ ಈ ಪ್ರಕ್ರಿಯೆಯಿಂದಾಗಿ ಮಸೂದೆಗೆ ಒಪ್ಪಿಗೆ ನೀಡುವ ಅವಧಿಯೇ ಸುದೀರ್ಘ‌ವಾಗಿರುತ್ತದೆ. ಇದರಿಂದ ಕಾಯ್ದೆಗಳನ್ನು ಜಾರಿಗೆ ತರಲು ಸಾಕಷ್ಟು ವಿಳಂಬವಾಗುತ್ತದೆ. ಒಂದು ದೃಷ್ಟಿಕೋನದಿಂದ ಈ ಸಂಗತಿ ಹೌದು ಎನ್ನಿಸಿದರೂ ಯಾವುದೇ ಮಸೂದೆಗಳನ್ನು ಜಾರಿಗೆ ತರಲು ಒಂದಷ್ಟು ಪರಿಷ್ಕರಣೆಯಾಗುವುದು ಅಗತ್ಯ. ಜತೆಗೆ ವಿಪಕ್ಷಗಳ ಬೆಂಬಲ ಪಡೆದು ಸರ್ವಾನುಮತದಿಂದ ಅಂಗೀಕಾರವಾದರೆ ಇನ್ನೂ ಉತ್ತಮ.

ಈ ಅಧಿವೇಶನ ಆರಂಭದ ಎರಡನೇ ದಿನವೇ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣ ಫ‌ಲಿತಾಂಶ ಹೊರಬೀಳಲಿದೆ. ಎರಡೂ ರಾಜ್ಯಗಳ ಫ‌ಲಿತಾಂಶವೂ ಸದನದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ.

ಕಳೆದ ಮುಂಗಾರು ಅಧಿವೇಶನ ಅಷ್ಟೇನೂ ರಚನಾತ್ಮಕವಾಗಿರಲಿಲ್ಲ. ಗದ್ದಲದಲ್ಲಿಯೇ ಶುರುವಾದ ಗದ್ದಲದಲ್ಲೇ ನಾಲ್ಕು ದಿನ ಮುಂಚೆಯೇ  ಮುಗಿದಿತ್ತು. ಅಧಿವೇಶನ ಕಾಲದಲ್ಲಿಯೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತಿತರರಿಗೆ ವಿಚಾರಣೆಗಾಗಿ ಇ.ಡಿ. ನೋಟಿಸ್‌ ನೀಡಿದ್ದು ಗದ್ದಲ ಸೃಷ್ಟಿಸಿತ್ತು.

ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಹಾಗೆಯೇ ಗದ್ದಲದ ಕಾರಣದಿಂದಾಗಿ 27 ಸಂಸದರನ್ನು ಕಲಾಪದಿಂದ ಅಮಾನತು ಮಾಡಲಾಗಿತ್ತು. ಈ ಎಲ್ಲ ಗದ್ದಲದಿಂದಾಗಿ ಲೋಕಸಭೆಯಲ್ಲಿ 44 ಗಂಟೆಗಳ ಕಾಲ ಅಧಿವೇಶನ ನಡೆದಿದ್ದರೆ ರಾಜ್ಯಸಭೆಯಲ್ಲಿ 38 ಗಂಟೆಗಳ ಕಾಲ ಕಲಾಪ ಆಗಿತ್ತು. ಈ ಬಾರಿಯೂ ಹೆಚ್ಚು ಕಡಿಮೆ ವಿಪಕ್ಷಗಳು ಕಳೆದ ಬಾರಿಯ ವಿಚಾರಗಳನ್ನೇ ಮುಂದಿಟ್ಟುಕೊಂಡಿವೆ.

Advertisement

ಬೆಲೆ ಏರಿಕೆ, ಜಿಎಸ್‌ಟಿ, ಕೇಂದ್ರ ಸಂಸ್ಥೆಗಳ ದುರುಪಯೋಗ, ಗಡಿಯಲ್ಲಿ ಚೀನದ ವರ್ತನೆ, ಕೇಂದ್ರ ಚುನಾವಣ ಆಯೋಗಕ್ಕೆ ಆಯುಕ್ತರ ನೇಮಕ ವಿವಾದ ಸಹಿತ ಹಲವಾರು ವಿಚಾರಗಳ ಬಗ್ಗೆ ಗಮನ ಸೆಳೆಯಲು ವಿಪಕ್ಷಗಳು ಸಜ್ಜಾಗಿವೆ. ಆದರೆ ಇಲ್ಲಿ ಆಡಳಿತದಲ್ಲಿರುವ ಸರಕಾರವಾಗಲಿ ಅಥವಾ ವಿಪಕ್ಷಗಳಾಗಲಿ ತಮ್ಮ ಪಟ್ಟು ಬಿಟ್ಟು ಕಲಾಪ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಸರಕಾರವೂ ಆದಷ್ಟು ಮಟ್ಟಿಗೆ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಇಲ್ಲದಿದ್ದಲ್ಲಿ ಮತ್ತೆ ಗದ್ದಲದ ಅಧಿವೇಶನವಾಗುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next