Advertisement
ಮೂರು ದಿನಗಳ ಅಧಿವೇಶನ ಹತ್ತು ದಿನಗಳಿಗೆ ವಿಸ್ತರಿಸಬೇಕೆಂಬ ಪ್ರತಿಪಕ್ಷಗಳ ಒತ್ತಾಯ ಇದೆಯಾದರೂ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದರೆ ಬಜೆಟ್ ಅನುಮೋದನೆ ಅಥವಾ ಲೇಖಾನುದಾನಕ್ಕೆ ಒಪ್ಪಿಗೆ ಪಡೆದು ಎರಡು ದಿನಗಳಿಗೆ ಅಧಿವೇಶನ ಬರ್ಖಾಸ್ತುಗೊಳಿಸಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದಿನ ಅಧಿವೇಶನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ, ಯಡಿಯೂರಪ್ಪ ವಿಶ್ವಾಸಮತ ಸಾಬೀತು, ಹೊಸ ಸರ್ಕಾರ ರಚನೆ ಗಡಿಬಿಡಿ, ಲೇಖಾನುದಾನಕ್ಕೆ ಒಪ್ಪಿಗೆಗೆ ಸೀಮಿತವಾಗಿ ಸಮಾಪ್ತಿಯಾಗಿತ್ತು.
Related Articles
Advertisement
ಇದೀಗ 1,200 ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆಯಾಗಿರುವುದರಿಂದ ಹೋರಾಟದ ಸ್ವರೂಪ ಬದಲಾಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಮೂಲಗಳ ಪ್ರಕಾರ ಕೇಂದ್ರ ಸರ್ಕಾರ 1,200 ಕೋಟಿ ರೂ. ಬಿಡುಗಡೆ ಮಾಡಿರುವುದು ಏನೇನೂ ಸಾಲದು. ರಾಜ್ಯದಲ್ಲಿ ವ್ಯಾಪಕ ಆಕ್ರೋಶ ಎದುರಾದ ನಂತರ 1,200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಷ್ಟದ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಎಂಬುದನ್ನು ಪ್ರತಿಪಾದನೆ ಮಾಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ.
ಜತೆಗೆ, ಉತ್ತರ ಕರ್ನಾಟಕ ಭಾಗದ ನಾಯಕರ ಮೂಲಕವೇ ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ಸ್ಥಿತಿಗತಿ ಕುರಿತು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕಲ್ಪಿಸಲು ಬೇಡಿಕೆ ಇಡುವುದು. ಬಜೆಟ್‌ಗೆ ಅನುಮೋದನೆ ನೀಡುತ್ತೇವೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ಪುನರ್ವಸತಿ ಸೇರಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಿ ಎಂದು ಒತ್ತಾಯಿಸಿ ಅಧಿವೇಶನ ಹತ್ತು ದಿನ ವಿಸ್ತರಿಸಲು ಆಗ್ರಹಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾದಯಾತ್ರೆಗೆ ಸಿದ್ದರಾಮಯ್ಯ ಚಿಂತನೆ: ಒಂದೊಮ್ಮೆ ಸರ್ಕಾರವು ಬಜೆಟ್ ಅಥವಾ ಲೇಖಾನುದಾನಕ್ಕೆ ಅಧಿವೇಶನ ಸೀಮಿತಗೊಳಿಸಿ ನೆರೆ ಪರಿಹಾರ ಕುರಿತು ಚರ್ಚೆಗೆ ಅವಕಾಶ ಕೊಡದಿದ್ದರೆ ಅದನ್ನೇ ಮುಂದಿಟ್ಟು ಬೆಳಗಾವಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಜೆಡಿಎಸ್ ಸಹ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತನ್ನದೇ ಮಾರ್ಗದಲ್ಲಿ ಹೋರಾಟಕ್ಕೆ ತೀರ್ಮಾನಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಸಂಬಂಧ ಚರ್ಚಿಸಿದ್ದಾರೆ.
ನೆರೆ ಪರಿಹಾರ ಹಾಗೂ ರಾಜ್ಯದ ಇತರೆ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಗೌಡರು ಸಲಹೆ ನೀಡಿದ್ದಾರೆಂದು ಹೇಳಲಾಗಿದೆ. ಈ ಮಧ್ಯೆ, ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗೆ ಪೂರ್ತಿ ಸ್ವಾತಂತ್ರ್ಯ ಕೊಟ್ಟಿಲ್ಲ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೇಲುಗೈ ಸಾಧಿಸುತ್ತಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಸರ್ಕಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂಬ ವಿಚಾರಗಳ ಬಗ್ಗೆಯೂ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳೂ ಇವೆ.
ಕಾಂಗ್ರೆಸ್‌ಗೆ ಜೆಡಿಎಸ್ ಸಾಥ್ ಸಿಗುತ್ತಾ?: ಲೋಕಸಭೆ ಚುನಾವಣೆಯಲ್ಲಿನ ಸೋಲು ಹಾಗೂ ಸಮ್ಮಿಶ್ರ ಸರ್ಕಾರದ ಪತನದ ನಂತರ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ “ಖತಂ’ಗೊಂಡಿದ್ದು, ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಸಾಥ್ ನೀಡುವುದು ಅನುಮಾನ. ಒಂದೊಮ್ಮೆ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರೇ ಪ್ರತಿಪಕ್ಷ ನಾಯಕರಾಗಿ ಘೋಷಣೆಯಾದರೆ ಜೆಡಿಎಸ್ ಬಹುತೇಕ ಅಂತರ ಕಾಯ್ದು ಕೊಳ್ಳಬಹುದು. ಬೇರೆ ಯಾರಾದರೂ ಪ್ರತಿಪಕ್ಷ ನಾಯಕ ಸ್ಥಾನ ಅಲಂಕರಿಸಿದರೆ ಆಗ ವಿಷಯ ಆಧಾರಿತ ಹೋರಾಟದಲ್ಲಿ ಜತೆಗೂಡುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಇಂದುಬೆಂಗಳೂರು: ಗುರುವಾರದಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರು ವುದರಿಂದ ಸದನದಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ಕುರಿತಂತೆ ಚರ್ಚಿಸಲು ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸಂಜೆ ಸಭೆ ನಡೆಯಲಿದೆ. ಕೇಂದ್ರ ಸರ್ಕಾರ ಕೇವಲ 1,200 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿರುವುದರಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ. ರೈತರ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದ್ದು, ಸರ್ಕಾರ ಇದುವರೆಗೂ ಬೆಳೆ ನಷ್ಟ ಪರಿಹಾರ ನೀಡದಿರುವುದರಿಂದ ರೈತರು ಹಿಂಗಾರು ಬೆಳೆ ಬೆಳೆಯಲೂ ಅವಕಾಶ ದೊರೆಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೇ ಪ್ರವಾಹದ ಜತೆಗೆ ರಾಜ್ಯದಲ್ಲಿ ಬರ ಪರಿಸ್ಥಿತಿಯೂ ನಿರ್ಮಾಣವಾಗಿದ್ದು, ಬರ ಪರಿಹಾರ ಕುರಿತಂತೆ ರಾಜ್ಯ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ಈ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಪ್ರವಾಹಕ್ಕೆ ಹೆಚ್ಚಿನ ಪರಿಹಾರ ಪಡೆಯಲು ಕೇಂದ್ರ ಸರ್ಕಾರಕ್ಕೆ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗುವಂತೆ ಮಾಡಿರುವ ಮನವಿಗೂ ಸರ್ಕಾರ ಸ್ಪಂದಿಸದಿರುವುದರಿಂದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಕಾರ್ಯತಂತ್ರವನ್ನು ರೂಪಿಸುವ ಸಾಧ್ಯತೆ ಇದೆ. ಅಸಮಾಧಾನ: ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತಂತೆ ಪಕ್ಷದಲ್ಲಿ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು ಕೆಲವು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತಂತೆ ಕೆಲವು ಶಾಸಕರು ಶಾಸಕಾಂಗ ಸಭೆಯಲ್ಲಿ ನಾಯಕರನ್ನು ಪ್ರಶ್ನಿಸಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ. * ಎಸ್.ಲಕ್ಷ್ಮಿನಾರಾಯಣ