ಬೆಂಗಳೂರು: ಸಿಂಗಪುರದ ಏರ್‌ಲೈನ್ ಸಂಸ್ಥೆಯಾದ ಸ್ಕೂಟ್ ಹಾಗೂ ಟೈಗರ್‌ಏರ್ ಏರ್‌ಲೈನ್ಸ್‌ನ ವಿಲೀನ ಒಡಂಬಡಿಕೆಯಂತೆ ಜಗತ್ತಿನಾದ್ಯಂತ ಇನ್ನು ಮುಂದೆ “ಸ್ಕೂಟ್’ ಬ್ರಾಂಡ್‌ನಡಿಯೇ ವ್ಯವಹರಿಸಲಿದೆ. ಸಿಂಗಪುರದಿಂದ ತಿರುಚಿರಾಪಳ್ಳಿ ನಡುವೆ ಸೋಮವಾರ ನಡೆಸಿದ ವಿಮಾನ ಹಾರಾಟ ಟೈಗರ್‌ಏರ್‌ನ ಕೊನೆಯ ಪ್ರಯಾಣವೆನಿಸಿದ್ದು, ಆ ಮೂಲಕ ತನ್ನ ಅಸ್ತಿತ್ವವನ್ನು ಸ್ಕೂಟ್‌ನಲ್ಲಿ ವಿಲೀನಗೊಳಿಸಿಕೊಂಡಿದೆ.
ಸ್ಕೂಟ್ ಬ್ರಾಂಡ್‌ನಡಿಯ ವ್ಯವಹಾರಕ್ಕೆ ಮಂಗಳವಾರ ಶುಭ ಕೋರಿದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, “ಬೆಂಗಳೂರು ಮಾತ್ರವಲ್ಲದೇ ಮಂಗಳೂರು, ಹುಬ್ಬಳ್ಳಿ, ಮೈಸೂರು ನಗರಗಳಿಗೂ ವಿಮಾನಯಾನ ಸೇವೆ ಒದಗಿಸುವತ್ತ ಗಮನ ಹರಿಸಬೇಕು.
ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದ ಜನರಿಗೆ ಸುಖಕರ ಹಾಗೂ ಸುರಕ್ಷಿತ ಪ್ರಯಾಣ ಸೌಲಭ್ಯ ಕಲ್ಪಿಸುವತ್ತ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು. ಸ್ಕೂಟ್ ಸಂಸ್ಥೆಯ ಭಾರತ ವಿಭಾಗದ ಮುಖ್ಯಸ್ಥ ಭರತ್ ಮಹದೇವನ್, “ಸ್ಕೂಟ್ ಹಾಗೂ ಟೈಗರ್‌ಏರ್ ಏರ್‌ಲೈನ್ಸ್ ನಡುವೆ ಒಂಬತ್ತು ತಿಂಗಳ ಹಿಂದೆಯೇ ಒಡಂಬಡಿಕೆಯಾಗಿದ್ದು, ಅದರಂತೆ ಮಂಗಳವಾರದಿಂದ ಸ್ಕೂಟ್ ಬ್ರಾಂಡ್‌ನಡಿ ವಿಮಾನಯಾನ ಸೇವೆ ಸಿಗಲಿದೆ.
ಭಾರತದಿಂದ ಸಿಂಗಾಪುರಕ್ಕೆ ಅತಿ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಒದಗಿಸಲಾಗುತ್ತಿದೆ. 10ಕ್ಕೂ ಹೆಚ್ಚು ಮಂದಿ ಒಟ್ಟಿಗೆ ಬುಕ್ಕಿಂಗ್‌ಗೆ ರಿಯಾಯ್ತಿ ಕೂಡ ಇದೆ. ಜಗತ್ತಿನ 18 ರಾಷ್ಟ್ರಗಳ 65 ಸ್ಥಳಗಳಿಗೆ ವಿಮಾನಯಾನ ಸೇವೆ ಸಿಗಲಿದ್ದು, ಪ್ರಯಾಣಿಕರಿಗೆ ಉತ್ತಮ ಸೇವೆ ಕಲ್ಪಿಸಲಾಗುವುದು’ ಎಂದು ಹೇಳಿದರು.