ರಾಮನಗರ: ಆದಾಯ ತರುವ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನೇ ಅದ್ವಾನ ಮಾಡಿರುವ ಎನ್‌ಎಚ್‌ಎಐ, ಹೆದ್ದಾರಿ ಬದಿಯಲ್ಲಿ ಸ್ಥಳೀಯರ ತಿರುಗಾಟಕ್ಕೆ ನೀಡಿರುವ ಸರ್ವಿಸ್ ರಸ್ತೆಯ ಕಾಮಗಾರಿಯ ಅವ್ಯವಸ್ಥೆಯಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ.
ಬೆಂ-ಮೈ ನಡುವೆ ದಶಪಥ ರಸ್ತೆ ನಿರ್ಮಾಣ ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, 6 ಪಥಗಳ ಎಕ್ಸ್‌ಪ್ರೆಸ್‌ವೇ ಜೊತೆಗೆ ಸ್ಥಳೀಯರ ತಿರುಗಾಟಕ್ಕಾಗಿ 4 ಪಥಗಳ ಸರ್ವೀಸ್ ರಸ್ತೆಯನ್ನು ನೀಡಿದೆ. ಆದರೆ, ಸರ್ವಿಸ್ ರಸ್ತೆ ಕಾಮಗಾರಿಯಲ್ಲಿ ಸಾಕಷ್ಟು ಲೋಪಗಳು ಸಂಭವಿಸಿದ್ದು, ಸರ್ವೀಸ್ ರಸ್ತೆಗಳು ಅವ್ಯವಸ್ಥೆಯ ಆಗರವಾಗಿದೆ. ಈಗಾಗಲೇ ನಿರ್ಮಾಣ ಮಾಡಿರುವ ಸರ್ವೀಸ್ ರಸ್ತೆ ಕೆಲವೆಡೆ ಕಿತ್ತು ಬಂದಿದೆ. ಇನ್ನು ಎಕ್ಸ್‌ಪ್ರೆಸ್‌ವೇಯನ್ನು ಕ್ಲೋಸ್ ಟೋಲ್ ಮಾಡಿದಲ್ಲಿ ಸರ್ವೀಸ್ ರಸ್ತೆಯ ಮೂಲಕ ದ್ವಿಚಕ್ರವಾಹನ ಮತ್ತು ಆಟೋಗಳಿಗೆ ಹೆದ್ದಾರಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸ್ಥಳೀಯ ತಿರುಗಾಟಕ್ಕೆ ಬಳಕೆಯಾಗುವ ಈ ಸರ್ವೀಸ್ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಹೆದ್ದಾರಿ ಪ್ರಾಧಿಕಾರ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲಲ್ಲಿ ತುಂಡಾದ ಸರ್ವೀಸ್ ರಸ್ತೆ: ಬೆಂಗಳೂರು ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಎರಡೂ ಬದಿಯಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಕೆಲವೆಡೆ ಸರ್ವೀಸ್ ರಸ್ತೆ ತುಂಡಾಗಿದೆ. ರೈಲ್ವೆ ಹಳಿಗಳ ಬಳಿ ಸರ್ವೀಸ್ ರಸ್ತೆ ಅಂತ್ಯಗೊಂಡಿದ್ದು, ಸರ್ವೀಸ್ ರಸ್ತೆಯಲ್ಲಿ ಹೋಗುವ ಪ್ರಯಾಣಿಕರು ಮತ್ತೆ ಸುತ್ತಿ ಬಳಸಿ ಹಿಂದಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಕುಂಬಳಗೂಡು ಬಸ್ ನಿಲ್ದಾಣದ ಬಳಿ ಬೆಂಗಳೂರು ಕಡೆಗೆ ಒಂದು ಕಿ.ಮೀ. ದೂರ ಸರ್ವೀಸ್ ರಸ್ತೆಯನ್ನೇ ನಿರ್ಮಾಣ ಮಾಡದೆ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಎಕ್ಸ್‌ಪ್ರೆಸ್ ವೇಗೆ ಬೈಕ್ ಸವಾರರ ಎಂಟ್ರಿ ನಿರ್ಬಂಧಿಸಿದರೆ ಅವರು ಸರ್ವೀಸ್ ರಸ್ತೆಯಲ್ಲಿ ಹೋಗುವುದೆಂತು ಎಂಬ ಪ್ರಶ್ನೆ ಕಾಡುತ್ತಿದ್ದು, ಎನ್‌ಎಚ್‌ಎಐ ಅಧಿಕಾರಿಗಳು ಇದಕ್ಕೆ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.
ಅಂಡ್‌ಪಾಸ್, ಮೇಲ್ಸೇತುವೆಗಳಲ್ಲೂ ಸಮಸ್ಯೆ: ಎಕ್ಸ್‌ಪ್ರೆಸ್‌ವೇನ ದಲ್ಲಿ ಸಂಚರಿಸುವ ವಾಹನ ಗಳಿಗೆ ಅಡ್ಡಿಯಾಗದಂತೆ ಸ್ಥಳೀಯ ವಾಹನ ಗಳು ಸಂಚರಿಸಲು ಎಕ್ಸ್‌ಪ್ರೆಸ್‌ವೇಗೆ ಅಲ್ಲಲ್ಲಿ ಅಂಡರ್‌ಪಾಸ್ ಮತ್ತು ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ, ಈ ಅಂಡರ್ ಪಾಸ್‌ಗಳು ಅವ್ಯವಸ್ಥೆಯಿಂದ ಕೂಡಿದ್ದು, ಕೆಲವೊಮ್ಮೆ ಅಂಡರ್ ಪಾಸ್‌ಗಳಲ್ಲಿ ಲೈಟ್‌ಗಳನ್ನು ಆನ್ ಮಾಡುವುದಿಲ್ಲ. ಮಳೆಗಾಲದ ಸಮಯದಲ್ಲಿ ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲುತ್ತಿದೆ. ಕೆಲವೆಡೆ ಮೇಲ್ಸೇತುವೆ ಕಿರಿದಾಗಿದ್ದು, ಒಂದು ಬಾರಿಗೆ ಎರಡು ವಾಹನಗಳು ಸಂಚರಿಸಲು ಸಮಸ್ಯೆಯಾಗಿದೆ.
ಹಲವಡೆ ಯೂಟರ್ನ್ ಸಮಸ್ಯೆ : ಪಂಚಮುಖೀ ಗಣಪತಿ ದೇವಾಲಯದಿಂದ ಕ್ರೈಸ್ಟ್ ಕಾಲೇಜಿನವರೆಗೆ ನಿರ್ಮಾಣ ಮಾಡಿರುವ ಎಲಿವೇಟೆಡ್ ರಸ್ತೆಯ ಕೆಳಭಾಗ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಗೆ ರಾಜರಾಜೇಶ್ವರಿ ಆಸ್ಪತ್ರೆಯಿಂದ ಕುಂಬಳ ಗೂಡಿನವರೆಗೆ 7 ಯೂಟರ್ನ್ ನೀಡಲಾಗಿದ್ದು, ಯೂಟರ್ನ್ಗಳ ಬಳಿ ವಾಹನಗಳು ತಿರುವು ಪಡೆಯಲು ಸಮಸ್ಯೆಯಾಗಿದೆ. ಎಲಿವೇಟೆಡ್ ಕಾರಿಡಾರ್‌ಗೆ ನಿರ್ಮಿಸಿರುವ ಸೇತುವೆ ಅಗಲವಾಗಿರುವ ಕಾರಣದಿಂದ ಎದುರು ಬರುವ ವಾಹನಗಳು ಕಾಣಿಸದೆ ಸಮಸ್ಯೆಯಾಗುತ್ತಿದೆ. ಇನ್ನು ಕಣ್ಮಿಣಿಕೆ ಬಳಿ ಇರುವ ಯೂಟರ್ನ್ ಸಹ ಸಮಸ್ಯೆಯಿಂದ ಕೂಡಿದೆ.
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ : ಬೆಂ-ಮೈ ನಡುವಿನ ಸರ್ವೀಸ್ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಕೆಲವೆಡೆ ಚರಂಡಿಯಲ್ಲಿ ನೀರು ಹರಿದು ಹೋಗದೆ, ಸರ್ವೀಸ್ ರಸ್ತೆಯಲ್ಲೇ ಹರಿಯುತ್ತಿದೆ. ರಾಜರಾಜೇಶ್ವರಿ ಆಸ್ಪತ್ರೆ ಬಳಿ ಚರಂಡಿ ಕುಸಿದು ಗುಂಡಿ ನಿರ್ಮಾಣಗೊಂಡಿದೆಯಾದರೂ, ಇನ್ನು ಇದನ್ನು ಸರಿಪಡಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿಲ್ಲ. ಇನ್ನು ಪೆಪ್ಸಿ ಗೇಟ್ ಬಳಿ ಮಳೆ ಬಂದರೆ ನೀರು ರಸ್ತೆಯಲ್ಲಿ ನಿಲ್ಲುತ್ತಿದೆ. ಕುಂಬಳಗೂಡು ಕೈಗಾರಿಕಾ ಪ್ರದೇಶದ ವೇ ಬ್ರಿಡ್ಜ್ ಬಳಿಯೂ ಇದೇ ಸಮಸ್ಯೆ ಎದುರಾಗಿದೆ. ಇದೇ ರೀತಿ ಬಿಡದಿಯ ಕಾಡುಮನೆ ಕ್ರಾಸ್ ಬಳಿಯೂ ಸಮಸ್ಯೆ ಉಂಟಾಗಿದ್ದು, ಮಳೆ ಸುರಿದಾಗ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ.
– ಸು.ನಾ.ನಂದಕುಮಾರ್