Advertisement

ಹಿರಿಯ ಅಧಿಕಾರಿ ಕನ್ನಡಿಗ ಕುಲಕರ್ಣಿ ಸೇವಾ ನಿವೃತ್ತಿ

08:17 PM Oct 11, 2020 | Suhan S |

ಮುಂಬಯಿ, ಅ. 10: ಸೆಂಟ್ರಲ್‌ ರೈಲ್ವೆಯ ಮುಂಬಯಿ ವಿಭಾಗದ ವಾಡಿಬಂದರ್‌ ಪರಿಸರದ ಹಿರಿಯ ಅಧಿಕಾರಿ, ಕನ್ನಡಿಗ ಭೀಮರಾವ್‌ ಕುಲಕರ್ಣಿ ಅವರು ತಮ್ಮ 35 ವರ್ಷಗಳ ಸುದೀರ್ಘ‌ ಸೇವೆಯ ಅನಂತರ ಸೆ. 30ರಂದು ಸೇವಾ ನಿವೃತ್ತಿ ಹೊಂದಿದರು.

Advertisement

ಸೆ. 29ರಂದು ವಾಡಿಬಂದರ್‌ನ ನ್ಯೂ ಕಾಂಪ್ಲೆಕ್ಸ್‌ ಸಭಾಗೃಹದಲ್ಲಿ ಕೋವಿಡ್‌ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳ ಪಾಲನೆಯೊಂದಿಗೆ ನಡೆದ ಸರಳ ಸಮಾರಂಭದಲ್ಲಿ ಕುಲಕರ್ಣಿ ಅವರನ್ನು ಬೀಳ್ಕೊಡಲಾಯಿತು. ಸಮಾರಂಭದಲ್ಲಿ ಮಧ್ಯ ರೈಲ್ವೇ ಮುಂಬಯಿ ವಿಭಾಗದ ಹಿರಿಯ ಅ ಧಿಕಾರಿಗಳು ಹಾಗೂ ಸಿಬಂದಿ ಉಪಸ್ಥಿತರಿದ್ದು, ಕುಲಕರ್ಣಿ ಅವರ ಕಾರ್ಯದಕ್ಷತೆ, ಹಾಗೂ ರೈಲ್ವೆಗಾಗಿ ನೀಡಿದ ಸೇವೆಯನ್ನು ಶ್ಲಾಘಿಸಿ ಅವರನ್ನು ಸಮ್ಮಾನಿಸಿ ಶುಭ ಹಾರೈಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿ ಕುಲಕರ್ಣಿ ಅವರು, ಕಳೆದ ಹಲವಾರು ವರ್ಷಗಳಿಂದ ರೈಲ್ವೇಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದು, ಆತ್ಮ ತೃಪ್ತಿಯಿದೆ. ಭವಿಷ್ಯದಲ್ಲೂ ರೈಲ್ವೇ ವಿಭಾಗಕ್ಕೆ ನನ್ನ ಸಹಕಾರ, ಪ್ರೋತ್ಸಾಹ ಇರಲಿದೆ. ಇಂದಿನ ಹೃದಯಸ್ಪರ್ಶಿ ಸಮಾರಂಭವನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ನಾನು ರೈಲ್ವೇ ಇಲಾಖೆಯಲ್ಲಿ ಏನಾದರೂ ಉತ್ತಮ ಕಾರ್ಯ ಮಾಡಿದ್ದರೆ ಅದು ಹಿರಿಯ ಅಧಿ ಕಾರಿಗಳ ಪ್ರೇರಣೆ ಹಾಗೂ ಸಹೋದ್ಯೋಗಿಗಳ ಸಹಕಾರದಿಂದಾಗಿ ಆಗಿದೆ. ನನ್ನ ಕುಟುಂಬದ ಸದಸ್ಯರ ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಸೇವೆಯನ್ನು ಗುರುತಿಸಿ ಸಮ್ಮಾನಿಸಿದ ನಿಮಗೆಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಎಲ್ಲರಿಗೂ ಶುಭ ಹಾರೈಸಿದರು.

ಭೀಮರಾವ್‌ ಕುಲಕರ್ಣಿ ಅವರ ಸ್ನೇಹಿತರು, ಪರಿವಾರದವರು ಉಪಸ್ಥಿತರಿದ್ದರು. ಭೀಮರಾವ್‌ ಕುಲಕರ್ಣಿ ಮೂಲತಃ ಕರ್ನಾಟಕದ ಬಾಗಲ್‌ಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಗಿರಗಾಂವ್‌ ಗ್ರಾಮದವರಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಡೊಂಬಿವಲಿಯಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next