Advertisement

ಸೇವೆ ಕಾಯಂ-ಕನಿಷ್ಠ ವೇತನಕ್ಕೆ ಆಗ್ರಹ

04:35 PM Dec 08, 2018 | Team Udayavani |

ದಾವಣಗೆರೆ: ಸರ್ಕಾರಿ ಹಾಸ್ಟೆಲ್‌, ವಸತಿ ಶಾಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವರ ಕಾಯಮಾತಿ, ಕನಿಷ್ಠ ವೇತನ ನಿಗದಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಹಾಸ್ಟೆಲ್‌, ವಸತಿ ಶಾಲಾ ಹೊರ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸಂಘಟನೆ ರಾಜ್ಯ ಸಹ ಕಾರ್ಯದರ್ಶಿ ಕೆ. ಹನುಮೇಗೌಡ ಮಾತನಾಡಿ, ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆಸಿದ್ದ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ಕೆಲಸದಿಂದ ತೆಗೆದು ಹಾಕಿದ್ದವರನ್ನ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆದರೂ, ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಹಲವಾರು ಸಮಸ್ಯೆಗಳಿವೆ. ಆ ಬಗ್ಗೆ ಸಂಬಂಧಿತರು ಕೂಡಲೇ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅ. 23ರ ಸುತ್ತೋಲೆ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರಿಗೆ ಮರಣ ಶಾಸನವಾಗಿದೆ. ಕೇವಲ 6 ತಿಂಗಳ ಅವಧಿಗೆ ಮಾತ್ರವೇ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರನ್ನ ಮುಂದುವರೆಸುವ
ಆದೇಶ ಇದೆ. ಅದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಸರ್ಕಾರ ಕೂಡಲೇ ಆ ಸುತ್ತೋಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರನ್ನ ಕಾಯಂ ಮಾಡುವ ಜೊತೆಗೆ ಕನಿಷ್ಠ ವೇತನ, ವಾರದ ರಜಾ ಸೌಲಭ್ಯ, ವೇತನ ಮತ್ತು ಗುರುತಿನ ಚೀಟಿ ನೀಡಬೇಕು. ಭವಿಷ್ಯನಿಧಿ ಪಾವತಿ ಮಾಡಿರುವ ಬಗ್ಗೆ ಸಂಬಂಧಿತರಿಗೆ ದಾಖಲೆ ಒದಗಿಸುವುದು, ಮೂರು ತಿಂಗಳ ಬಾಕಿ ವಿತರಿಸುವುದು, ಪುನಾ ಕೆಲಸಕ್ಕೆ ತೆಗೆದುಕೊಂಡಿರುವರ ವೇತನ ಪಾವತಿ ಒಳಗೊಂಡಂತೆ ಸರ್ಕಾರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಗೌರವ ಅಧ್ಯಕ್ಷ ಕೆ.ಎಲ್‌. ಭಟ್‌, ಪ್ರಾಂತ ರೈತ ಸಂಘದ ಇ. ಶ್ರೀನಿವಾಸ್‌, ಟಿ.ವಿ. ರೇಣುಕಮ್ಮ, ಕೆ.ಎಚ್‌. ಆನಂದರಾಜ್‌, ಬಿ.ಎನ್‌. ಹಾಲೇಶ್‌ನಾಯ್ಕ, ಎಚ್‌. ಸದಾಶಿವನಾಯ್ಕ, ಕೆ.ಎಚ್‌. ರವಿಕುಮಾರ್‌, ಎಚ್‌.ಎಂ. ಪರಶುರಾಮಪ್ಪ, ಎಂ. ಏಕಾಂತಯ್ಯ, ಬಸವರಾಜ್‌, ಕರಡಿ ಮಂಜುನಾಥ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next