Advertisement

ಆಕಾಶವಾಣಿಗೆ ಬೇಂದ್ರೆ ಸೇವೆ ಅಪಾರ

01:27 PM Feb 14, 2017 | Team Udayavani |

ಹುಬ್ಬಳ್ಳಿ: ಆಕಾಶವಾಣಿಗಾಗಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದ ಅಂಬಿಕಾತನಯದತ್ತರು ಒಬ್ಬ ಅಪ್ಪಟ ಪ್ರಸಾರಕರೂ ಆಗಿದ್ದರು ಎಂದು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ಹೇಳಿದರು. ಡಾ| ಕೆ.ಎಸ್‌. ಶರ್ಮಾ ವಿಶ್ವಶ್ರಮ ಚೇತನ ಆವರಣದ ಬೇಂದ್ರೆ ಸಂಶೋಧನಾ ಸಂಸ್ಥೆ ದ.ರಾ.ಬೇಂದ್ರೆಯವರ 122ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಬೇಂದ್ರೆ ಒಬ್ಬ ಕವಿ, ನಾಟಕಕಾರ, ಸಂಖ್ಯಾಶಾಸ್ತ್ರಜ್ಞ, ತತ್ವಜ್ಞಾನಿಯಾಗಿದ್ದರಲ್ಲದೇ ಅವರೊಬ್ಬ ಅಪ್ಪಟ ಪ್ರಸಾರಕರಾಗಿದ್ದರು. ಅವರ ಹಲವಾರು ಕಾರ್ಯಕ್ರಮಗಳು ದೇಶದ ವಿವಿಧ ಆಕಾಶವಾಣಿ ಕೇಂದ್ರಗಳಿಗಾಗಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ, ನಿರ್ಮಾಣ ಮಾಡಿದ್ದರು. ಬೇಂದ್ರೆಯವರು ಹಲವು ವರ್ಷಗಳ ಕಾಲ ಧಾರವಾಡ ಆಕಾಶವಾಣಿ ಕೇಂದ್ರದ ಸಾಹಿತ್ಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು ಎಂದರು. 

ಹಲವು ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದ ದ.ರಾ. ಬೇಂದ್ರೆ ಅವರ ಚರ್ಚೆ, ಭಾಷಣಗಳ ಧ್ವನಿ ಮುದ್ರಿಕೆಗಳು ಆಕಾಶವಾಣಿ ಧಾರವಾಡ ಕೇಂದ್ರದಲ್ಲಿವೆ. ಬಾನುಲಿ ಬಗ್ಗೆಯೇ ಬೇಂದ್ರೆ ಕಾವ್ಯ ಬರೆದಿದ್ದು ಅನೇಕರಿಗೆ ತಿಳಿದಿಲ್ಲ ಎಂದು ಹೇಳಿದರು. ಡಾ| ಜಿ.ವಿ. ಕುಲಕರ್ಣಿ ಮಾತನಾಡಿ, ಜೀವನದಲ್ಲಿ ನಾನು ಹಲವು ಬಾರಿ ವಿಫ‌ಲಗೊಂಡಿದ್ದೇನೆ. ಆದರೆ ಪ್ರತಿ ಬಾರಿ ವಿಫ‌ಲನಾದಾಗ ಪುಟಿದೇಳಲು ಸ್ಫೂರ್ತಿ ನೀಡಿದ್ದೇ ಸಾಹಿತ್ಯ.

ಸಾಧನೆ ಮಾಡಬೇಕೆಂಬ ತುಡಿತ ಹಾಗೂ ಸಾಹಿತಿಗಳ ಒಡನಾಟದಿಂದ ಎಂಥ ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು ಎಂದರು. ಡಾ| ಬಿ.ವಿ.ಶಿರೂರ ಮಾತನಾಡಿ, ಬೇಂದ್ರೆಯವರ “ಔದುಂಬರಗಾಥಾ’ ಜೀವನದ ಕಥೆಯನ್ನು ಸಾರುತ್ತದೆ. ಇದು ಮಹಾಕಾವ್ಯವಾಗಿದ್ದು, ಇದು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ. ಶಿಷ್ಯರನ್ನು ಬೆಳೆಸುವ ಮಹಾನ್‌ ಗುಣ ಅಂಬಿಕಾತನಯದತ್ತರಲ್ಲಿತ್ತು ಎಂದರು. 

ಡಾ| ಬಿ.ಬಿ. ರಾಜಪುರೋಹಿತ ಮಾತನಾಡಿ, ದ.ರಾ. ಬೇಂದ್ರೆಯವರ ಅನೇಕ ಕವಿತೆಗಳ ಮೊದಲ ಶ್ರೋತೃ ನಾನಾಗಿದ್ದೆ. ಅದು ನನ್ನ ಸುದೈವ ಎಂದೇ ಭಾವಿಸಿದ್ದೇನೆ. ಬೇಂದ್ರೆ ಅವರಿಗೆ ಖಗೋಳ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆಯೂ ಅಪಾರ ಜ್ಞಾನವಿತ್ತು. ಅವರ ಕಾರ್ಯಕ್ಷೇತ್ರ ವಿಶಾಲವಾಗಿತ್ತು ಎಂದು ತಿಳಿಸಿದರು. 

Advertisement

ಡಾ| ಜಿ.ಎಂ. ಹೆಗಡೆ, ಪದ್ಮಶ್ರೀ ಡಾ| ಎಂ.ಎಂ. ಜೋಶಿ ಮಾತನಾಡಿದರು. ಇದೇ ಸಂದರ್ಭದಲ್ಲಿ “ಔದುಂಬರಗಾಥೆ’ ಮಹಾಕಾವ್ಯ, “ಬೇಂದ್ರೆಯವರ ಅಮರ ಕವನಗಳು ಮಧುರ ಕಥನಗಳು’ ಹಾಗೂ “ಆರೊಬಿಂದೋಸ್‌ ಇನ್‌ಫ‌ುಯೆನ್ಸ್‌ಆನ್‌ ವಿನಾಯಕ  ಕೃಷ್ಣ ಗೋಕಾಕ್ಸ್‌ ರೈಟಿಂಗ್ಸ್‌’ ಕೃತಿಗಳ ಲೋಕಾರ್ಪಣೆ ನಡೆಯಿತು. ಆರಂಭದಲ್ಲಿ ಡಾ| ಗಾಯತ್ರಿ ದೇಶಪಾಂಡೆ ಬೇಂದ್ರೆಯವರ ಕಾವ್ಯಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next