ಕೊಪ್ಪಳ: ನಗರದ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್-19 ನಿರ್ವಹಣೆ ಕಾರ್ಯಕ್ಕೆ ಅವರ ಸೇವೆ ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸದ್ಯಕ್ಕೆ ಆರೋಗ್ಯ ಸೇವೆ ಉತ್ತಮಗೊಳಿಸಲು ಮಾನವ ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ವ್ಯವಸ್ಥಿತ ಕಾರ್ಯ ನಿರ್ವಹಣೆಗೆ ತರಬೇತಿ ಪಡೆದ ಮೆಡಿಕಲ್ ಕಾಲೇಜಿನ 142 ವಿದ್ಯಾರ್ಥಿಗಳನ್ನು ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿಸಲು ಕ್ರಮಕೈಗೊಳ್ಳಿ. ವೈದ್ಯಕೀಯ ತರಬೇತಿ ಪಡೆದಿರುವುದರಿಂದ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿಯೂ ಅವರು ಸಹಕಾರಿಯಾಗಲಿದ್ದಾರೆ ಎಂದರು.
ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ ಪರಿಶೀಲನೆ ವೇಳೆ ಅಗತ್ಯ ಮಾನವ ಸಂಪನ್ಮೂಲದ ಕೊರತೆಯ ನಡುವೆಯೂ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿನ ವೈದ್ಯರು ಕೋವಿಡ್ ಆಸ್ಪತ್ರೆ ನಿರ್ವಹಿಸುತ್ತಿದ್ದಾರೆ. ಅದರಂತೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿನ ವ್ಯವಸ್ಥೆ ಉತ್ತಮಗೊಳಿಸಿ. ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸಲು ವ್ಯವಸ್ಥೆ ಕಲ್ಪಿಸಿ. ರೋಗಿಗಳಿಗೆ ಔಷ ಧಿಗಳೊಂದಿಗೆ ಮಾನಸಿಕ ಬೆಂಬಲದ ಅಗತ್ಯವಿದೆ. ಆದ್ದರಿಂದ ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಕನಿಷ್ಠ 10 ನಿಮಿಷಗಳ ಕಾಲ ಅಧ್ಯಾತ್ಮಿಕ ವಿಷಯಗಳು, ಮೃದು ಸಂಗೀತ ಧ್ವನಿಮುದ್ರಿಕೆಗಳನ್ನು ಪ್ರಸಾರ ಮಾಡುವ ವ್ಯವಸ್ಥೆ ಮಾಡಿ ಎಂದರು.
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಒಂದು ಸಿ.ಟಿ ಸ್ಕ್ಯಾನ್ ಯಂತ್ರ ಆರಂಭವಾಗಿದೆ. ಡಿಎಂಎಫ್ ನಿಧಿಯಲ್ಲಿ ಇನ್ನೊಂದು ಸಿ.ಟಿ ಸ್ಕ್ಯಾನ್ ಯಂತ್ರ ಅಳವಡಿಸಲು ಕ್ರಮವಹಿಸಿ. ಗಿಣಿಗೇರಾ ಕೆರೆ ನಿರ್ಮಾಣ ಯೋಜನೆ, ಕೋಳೂರು ಬ್ರಿಡ್ಜ್ ದುರಸ್ಥಿ ಸೇರಿದಂತೆ ನೀರಾವರಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಎಂದು ಸಚಿವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ನಗರದ ತರಕಾರಿ ಮಾರುಕಟ್ಟೆಯನ್ನು ನಗರದ ಹೊರವಲಯದಲ್ಲಿ ನಿರ್ಮಿಸಿದೆ. ಅಲ್ಲಿ ವ್ಯಾಪಾರಸ್ಥರಿಗೆ ಅಗತ್ಯ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಉತ್ತಮ ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯ ಕಲ್ಪಿಸಿ ಎಂದರು.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಸಭೆಯಲ್ಲಿ ಡಿಸಿ ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದನ್ ಮೂರ್ತಿ, ಎಸ್ಪಿ ಟಿ.ಶ್ರೀಧರ, ಎಡಿಸಿ ಎಂ.ಪಿ.ಮಾರುತಿ, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ಡಿಎಚ್‌ಒ ಡಾ| ಲಿಂಗರಾಜ ಟಿ., ಕಿಮ್ಸ್ ನಿರ್ದೇಶಕ ಡಾ| ವೈಜನಾಥ ಇಟಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.