Advertisement

ಸೇವೆಯೇ ಕಾಮಧೇನು ಸಂಸ್ಥೆಯ ಗುರಿ: ರವಿ ಕುಮಟಗಿ

03:41 PM Jan 14, 2022 | Team Udayavani |

ಬಾಗಲಕೋಟೆ: ಮಹಾಮಾರಿ ಕೊರೊನಾದಿಂದ ಬಾಗಲಕೋಟೆಯ ಜನ ಹಲವು ರೀತಿಯ ತೊಂದರೆ ಅನುಭವಿಸಿದರು. ಇದೀಗ ಮತ್ತೆ 3ನೇ ಅಲೆ ಬಂದಿದೆ. ಜನರು ಇದನ್ನು ನಿರ್ಲಕ್ಷಿಸದೇ, ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕು. ಅಲ್ಲದೇ ಬಾಗಲಕೋಟೆಯ ಜನರ ಸೇವೆಗಾಗಿ ಕಾಮಧೇನು ಸಂಸ್ಥೆ ಸದಾಸಿದ್ಧವಿದ್ದು, ಯಾವುದೇ ಸಂದರ್ಭದಲ್ಲೂ ಜನರೊಂದಿಗೆ ಇರುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಹುಟ್ಟಿಕೊಂಡಿದ್ದೇ ಕೊರೊನಾ ವೇಳೆ ಜನರ ಸೇವೆಗಾಗಿ. ಸಂಪೂರ್ಣ ಲಾಕ್‌ಡೌನ್‌ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ ಹೊಲದಲ್ಲೇ ಹಾಳಾಗಿ ಹೋಗುತ್ತಿತ್ತು. ಇತ್ತ ನಗರ ಪ್ರದೇಶದ ಜನರು ತರಕಾರಿ ಸಿಗದೇ ಪರದಾಡುತ್ತಿದ್ದರು. ಈ ವೇಳೆ ಕಾಮಧೇನು ಸಂಸ್ಥೆಯಿಂದ ಖರೀದಿದಾರರು ಹಾಗೂ ರೈತರ ಸಂಪರ್ಕ ಕೊಂಡಿಯಾಗಿ, ನಗರ ಪ್ರದೇಶದ ಜನರಿಗೆ ಮನೆ ಮನೆಗೆ ತರಕಾರಿ ತಲುಪಿಸುವ ಕೆಲಸ ಮೊದಲ ಬಾರಿಗೆ ಆರಂಭಿಸಿತ್ತು.

ಆಗ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ ಜಿಲ್ಲಾಡಳಿತ ಸೀಲ್‌ ಡೌನ್‌ ಮಾಡಿದ ಪ್ರದೇಶದ ಪ್ರತಿ ಮನೆಗೂ ತರಕಾರಿ ತಲುಪಿಸಿದೇವು. ಸಂಸ್ಥೆಯಿಂದ ರೈತರ ತರಕಾರಿ ಖರೀದಿಸಿ, ಸೀಲ್‌ಡೌನ್‌ ಪ್ರದೇಶದ ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಡೆಸಲಾಯಿತು ಎಂದರು.

ರೈತರಿಂದ 26.48 ಲಕ್ಷ ಸಂದಾಯ: ನಗರದ ವಿದ್ಯಾಗಿರಿ, ನವನಗರ ಹಾಗೂ ಹಳೆಯ ನಗರ ಮೂರು ಭಾಗಗಳಲ್ಲಿ ಜನರು ಫೋನ್‌ ಕರೆ ಮೂಲಕ ಕೇಳುವ ತರಕಾರಿಯನ್ನು ನಮ್ಮ   ಸಂಸ್ಥೆಯ ಕಾರ್ಯಕರ್ತರು ಮನೆ ಬಾಗಿಲಿಗೆ ತಲುಪಿಸಿದರು. ನಮ್ಮ ಸಂಸ್ಥೆ ಕೊರೊನಾ ವೇಳೆ ಮಾಡಿದ ಸೇವೆಯನ್ನು ಪರಿಗಣಿಸಿ, 2020ರ ನವ್ಹೆಂಬರ್‌ನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌವರವಿಸಿತು. ಲಾಕ್‌ಡೌನ್‌ ವೇಳೆ ಜಿಲ್ಲೆಯ ಬಾಗಲಕೋಟೆ, ಮುಧೋಳ, ಕಾಡರಕೊಪ್ಪ, ಬೀಳಗಿ, ಬೆಳಗಾವಿ, ಘಟಪ್ರಭಾ, ಧಾರವಾಡ ಹೀಗೆ ವಿವಿಧೆಡೆಯಿಂದ ರೈತರು ಬೆಳೆದ ಮಾವಿನ ಹಣ್ಣು ಸಹಿತ ವಿವಿಧ ಹಣ್ಣು ತಂದು ಜನರಿಗೆ ತಲುಪಿಸಲಾಯಿತು. ಮುಖ್ಯವಾಗಿ ರೈತರು ಬೆಳೆದ ವಿವಿಧ ತರಕಾರಿ, ಆಹಾರ ಸಾಮಗ್ರಿಗಳನ್ನು 26,48,572 ರೂ. ಮೊತ್ತದಲ್ಲಿ ಖರೀದಿಸಿ, ರೈತರಿಗೂ ನೆರವಾಗುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ನಿರಂತರ ಊಟ: 2ನೇ ಅಲೆಯ ಸಂದರ್ಭದಲ್ಲಿ ಲಾಕ್‌ಡೌನ್‌ ಆದಾಗ ಜಿಲ್ಲಾ ಆಸ್ಪತ್ರೆ ಹಾಗೂ ನಗರದ ಬೇರೆ ಬೇರೆ ಪ್ರದೇಶದ ಜನರಿಗೆ ಊಟದ ಪೊಟ್ಟಣ ವಿತರಿಸುವ ಕೆಲಸ ಆರಂಭಿಸಿದ್ದೇವು. ಬೇರೆ ಬೇರೆ ಗ್ರಾಮಗಳಿಂದ ಬರುವ ರೋಗಿಗಳು ದಾಖಲಾದ ಆಸ್ಪತ್ರೆಗೆ ತೆರಳಿ ರೋಗಿಗಳು ಹಾಗೂ ಅವರೊಂದಿಗೆ ಬಂದವರಿಗೆ ಊಟ ನೀಡಿ, ಪರದಾಡುವುದನ್ನು ತಪ್ಪಿಸಲಾಯಿತು.

Advertisement

ಹಸಿದವರಿಗೆ ಅನ್ನ ನೀಡುವ ಈ ಕಾರ್ಯಕ್ಕೆ ಸಂಸ್ಥೆಯ ಸದಸ್ಯರು, ನಗರದ ಹಲವು ದಾನಿಗಳು, ವಿದೇಶದಲ್ಲಿ ವಾಸಿಸುವ ಹಲವರು ಸೇರಿ ಸುಮಾರು 111ಕ್ಕೂ ಹೆಚ್ಚು ಕೈಜೋಡಿಸಿದರು. ಮೇ 6ರಿಂದ ಮಧ್ಯಾಹ್ನ ಊಟ ಸಂಸ್ಥೆಯಿಂದ ನೀಡಿದ್ದು, ಇದರೊಂದಿಗೆ ವಿಪ್ರ ಕೇಸರಿ ಟ್ರಸ್ಟ್‌ , ಬ್ರಾಹ್ಮಣ ತರುಣ ಸಂಘಗಳೂ ನಮ್ಮೊಂದಿಗೆ ಅವರೂ ಊಟ ಪೂರೈಸಿದರು. ಅಲ್ಲದೇ ಕ್ವಾರೆಂಟೈನ್‌ ಆದ ಸೋಂಕಿತರಿಗೆ ಊಟ ನೀಡುವ ಜತೆಗೆ 25 ಶ್ರಮಿಕ ಸಮಾಜದ ನೂರಾರು ಬಡ
ಕುಟುಂಬಗಳಿಗೆ 900 ದಿನಸಿ ಆಹಾರಧಾನ್ಯ ಕಿಟ್‌ ವಿತರಿಸಲಾಯಿತು. ಈ ಎಲ್ಲ ಕಾರ್ಯವನ್ನು ಕಂಡ ಜಿಲ್ಲೆಯೂ ಸೇರಿದಂತೆ ವಿವಿಧೆಡೆಯಿಂದ ಬಾಗಲಕೋಟೆಗೆ ಬಂದಿದ್ದ ಜನರು, ಬಾಗಲಕೋಟೆಯವರು ಉಪವಾಸ ಕಳುಹಿಸಲಿಲ್ಲ ಎಂದು ಹಾರೈಸಿದರು ಎಂದು ವಿವರಿಸಿದರು.

ರೈತರಿಗೆ ತರಬೇತಿ: ಸದ್ಯ ಮತ್ತೆ 3ನೇ ಅಲೆ ಬಂದಿದ್ದು, ಜನರು ಆತಂಕಗೊಳ್ಳದೇ ಜಾಗೃತಗೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಕೊರೊನಾ ಎರಡು ಅಲೆಯಲ್ಲೂ ನಮ್ಮ ಸಂಸ್ಥೆಯಿಂದ ಸಹಾಯ-ಸಹಕಾರ ನೀಡಿದ್ದು, ಈ ಬಾರಿಯೂ ಅಂತಹ ಪರಿಸ್ಥಿತಿ ಬಂದರೆ ಕಾಮಧೇನು ಸಂಸ್ಥೆ, ಎಲ್ಲ ರೀತಿಯ ಸಹಕಾರಕ್ಕೆ ಸಿದ್ಧವಿದೆ. ಈಗಾಗಲೇ ಮಲ್ಲಿಕಾರ್ಜುನ ಚರಂತಿಮಠ ಅವರು 5 ಸಾವಿರ ಮಾಸ್ಕ್ ನೀಡಿದ್ದು, ಒಂದು ವೇಳೆ ಲಾಕ್‌ಡೌನ್‌ ಆದರೆ, ಮುಂದೇನು ಮಾಡಬೇಕೆಂಬ ಚಿಂತನೆ ಸಂಸ್ಥೆಯ ಸದಸ್ಯರೆಲ್ಲ ಕೂಡಿ ನಡೆಸಿದ್ದೇವೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಕಾಮಧೇನು ಸಂಸ್ಥೆಯಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವಾರು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಕನ್ನಡ ಶಾಲೆಯ ಮಕ್ಕಳಿಗೆ ನೋಟ್‌ಬುಕ್‌ ವಿತರಣೆ, ಹೆಣ್ಣು ಮಕ್ಕಳಿಗಾಗಿ ಹೊಲಿಗೆ ತರಬೇತಿ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಲು ಕೃಷಿ ವಿಜ್ಞಾನಿಗಳಿಂದ ತರಬೇತಿ ಹೀಗೆ ಹಲವು ಕಾರ್ಯಕ್ರಮ ನಡೆಸಲಾಗುವುದು ಎಂದರು. ಕಾಮಧೇನು ಸಂಸ್ಥೆಯ ಪ್ರಮುಖರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ಶಿವು ಮೇಲಾ°ಡ ಮುಂತಾದವರಿದ್ದರು.

ಈಗ ಕೊರೊನಾ ಸಂಕಷ್ಟದ ಸಮಯವಿದೆ. ಈಗ ರಾಜಕೀಯ ಬಗ್ಗೆ ಮಾತನಾಡುವುದಿಲ್ಲ. ಅದಕ್ಕಾಗಿಯೇ ಮುಂದೆ ಸೂಕ್ತ ಸಂದರ್ಭದಲ್ಲಿ ರಾಜಕೀಯ ಕುರಿತು ಮಾತನಾಡುತ್ತೇವೆ. ಬಾಗಲಕೋಟೆ ಜನರ ಸೇವೆ ಮಾಡಲೆಂದೇ ಕಾಮಧೇನು ಸಂಸ್ಥೆ ಹುಟ್ಟಿಕೊಂಡಿದೆ. ಇದಕ್ಕೆ ಜನರ ಸಹಕಾರವೂ ಬಹಳಷ್ಟು ದೊರೆಯುತ್ತಿದೆ. ಕೊರೊನಾದಿಂದ ಜನರ ರಕ್ಷಣೆಯೇ ನಮ್ಮ ಮೂಲ ಆಶಯ.
ಮಲ್ಲಿಕಾರ್ಜುನ ಚರಂತಿಮಠ, ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next