Advertisement

ಸರ್ವಿಸ್‌ ರಸ್ತೆಯೇ ಹೆದ್ದಾರಿ; ಇದು ಕುಂದಾಪುರ ನಗರದ ವೈಶಿಷ್ಟ್ಯ!

10:31 AM Sep 30, 2019 | sudhir |

ಕುಂದಾಪುರ: ಹೆದ್ದಾರಿ ಕಾಮಗಾರಿ ಪೂರ್ಣ ಅರೆಬರೆಯಾಗಿ ರುವ ನಗರ ಕುಂದಾಪುರ. ಸರ್ವಿಸ್‌ ರಸ್ತೆಯೇ ಹೆದ್ದಾರಿಯಾಗಿ ಕಿ.ಮೀ.ಗಟ್ಟಲೆ ಇರುವುದು ಇಲ್ಲಿ ಮಾತ್ರ!

Advertisement

ನಗರ ಪ್ರವೇಶಿಸುವಾಗ ಬಸೂÅರು ಮೂರುಕೈ ಅಂಡರ್‌ಪಾಸ್‌ ಮತ್ತು ಪೇಟೆಯಲ್ಲಿ ಫ್ಲೈಓವರ್‌ ಎರಡರ ಕಾಮಗಾರಿಯೂ ಅಪೂರ್ಣವಾಗಿದೆ. ಇಕ್ಕಟ್ಟಾದ ಸರ್ವಿಸ್‌ ರಸ್ತೆಯಲ್ಲಿ ಬರುತ್ತಿದ್ದಂತೆಯೇ ಅಂಡರ್‌ಪಾಸ್‌ ಕಾಣಿಸುತ್ತದೆ. ಅವಸರದಲ್ಲಿ ಆರಂಭಿಸಿದ ಕಾಮಗಾರಿ ಪೂರ್ಣವಾಗಲೇ ಇಲ್ಲ.

ಅನಂತರ ಶಾಸ್ತ್ರೀ ಸರ್ಕಲ್‌ಗೆ ಬಂದರೆ ಅಲ್ಲಿದೆ ಫ್ಲೈಓವರ್‌. ಆರೇಳು ವರ್ಷಗಳಿಂದ ಅರ್ಧ ಕಾಮಗಾರಿ ಪೂರೈಸಿರುವ ಇಲ್ಲಿ ಸಂಪರ್ಕ ರಸ್ತೆಯೂ ಇಲ್ಲ. ಸಂಪರ್ಕ ರಸ್ತೆಯ ಆರಂಭ ಮತ್ತು ಅಂತ್ಯ ಗೊಂದಲದಲ್ಲಿದೆ. ಭಾರೀ ಗಾತ್ರದ ಹೊಂಡಗಳೂ ಇವೆ.

100 ಮೀ. ಕಾಮಗಾರಿಗೆಯೇ ಇಲ್ಲ
ಕೆಎಸ್‌ಆರ್‌ಟಿಸಿವರೆಗೆ ನವಯುಗ ಕಂಪೆನಿಗೆ ಗುತ್ತಿಗೆಯಾದರೆ ಅನಂತರ ಐಆರ್‌ಬಿ ಕಂಪೆನಿಯವರಿಗೆ. ಕೆಎಸ್‌ ಆರ್‌ಟಿಸಿಯಿಂದ ಸಂತೆ ಮಾರು ಕಟ್ಟೆವರೆಗೆ ಯಾರಿಗೂ ಗುತ್ತಿಗೆ ವಹಿಸಿ ಲ್ಲದ ಕಾರಣ 100 ಮೀ. ಕಾಮಗಾರಿಗೆ ಯಾರೂ ಹೊರಟಿಲ್ಲ. ಅಲ್ಲಿನ ಜನರಿಗೆ ಮಳೆಯಾದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ.

ಅಗಲ ಕಡಿಮೆ
ಕುಂದಾಪುರದಲ್ಲಿ ದಿನಕ್ಕೆ ಪಿಸಿಯು (ಪರ್‌ ಕಾರ್‌ ಯುನಿಟ್‌) ಪ್ರಕಾರ 33,660 ವಾಹನಗಳ ಓಡಾಡುತ್ತವೆ. ಈ ಪೈಕಿ ಶೇ. 70 ವಾಹನಗಳು ದ.ಕ. ಉಡುಪಿಯವು. ಒಂದು ಸರ್ವೆಯಂತೆ ಶಾಸ್ತ್ರೀ ಸರ್ಕಲ್‌ ಮೂಲಕ ಬೆಳಗ್ಗೆ, ಸಂಜೆ 10 ಸಾವಿರ ಜನರು ಸಾಗುತ್ತಾರೆ. ಎಲ್ಲ ಕಡೆ ರಸ್ತೆ 60 ಮೀ. ಅಗಲ ಇದ್ದರೆ, ಕೋಟ ಹಾಗೂ ಕುಂದಾಪುರದಲ್ಲಿ 45 ಮೀ. ಮಾತ್ರ ಅಗಲ ಇದೆ.

Advertisement

ಅಸಮರ್ಪಕ ಚರಂಡಿ
ವಿನಾಯಕ ಥಿಯೇಟರ್‌ನಿಂದ  ಸಂಗಮ್‌ವರೆಗೆ ಸರ್ವಿಸ್‌ ರಸ್ತೆಯಿಂದ ಸಂಪರ್ಕ
ರಸ್ತೆಯೇ ಇಲ್ಲ. ಪೇಟೆಗೆ ಬರಬೇಕಾದರೆ ವಿನಾಯಕ ಬಳಿಯೇ ವಾಹನ ತಿರುಗಿಸಬೇಕು. ಇಲ್ಲದಿದ್ದರೆ ಅಂಡರ್‌ಪಾಸ್‌ ಮತ್ತು ಫ್ಲೈಓವರ್‌ ದಾಟಿ ಕೆಎಸ್‌ಆರ್‌ಟಿಸಿ ಬಳಿ ಹೋಗಬೇಕಾಗುತ್ತದೆ. ಸಮರ್ಪಕ ಚರಂಡಿ ಇಲ್ಲದೆ ಮಳೆನೀರು ರಸ್ತೆಯಲ್ಲೇ ಹಾದುಹೋಗುತ್ತದೆ. ಸಂಗಮ್‌ ಸಮೀಪ ಚರಂಡಿ ಇದ್ದರೂ ಅದರಲ್ಲಿ ನೀರು ಹರಿಯುವುದಿಲ್ಲ.

ಅಪಘಾತ ತಪ್ಪಿಸಬಹುದು
ಹೆದ್ದಾರಿಯಲ್ಲಿ ತಡೆರಹಿತ ಓಡಾಟಕ್ಕೆ ಅನುವು ಮಾಡಬೇಕು. ಆದರೆ ಅಸಮರ್ಪಕ ವಿನ್ಯಾಸದಿಂದಾಗಿ ಅಲ್ಲಲ್ಲಿ ಬ್ಯಾರಿಕೇಡ್‌ ಇಟ್ಟು ಅಪಘಾತಗಳ ಸಂಖ್ಯೆ ಜಾಸ್ತಿಯಾಗಿದೆ. ಪ್ರತಿ ಬ್ಯಾರಿಕೇಡ್‌ ಬಳಿ ಬಿದ್ದಿರುವ ಗಾಜಿನ ಚೂರುಗಳೇ ಇದಕ್ಕೆ ಸಾಕ್ಷಿ. ವಿಭಾಜಕಗಳ ನಡುವೆ ಮಳೆನೀರು ಹರಿಯಲು ಮಾಡಿರುವ ಅಲ್ಪ ಅವಕಾಶದಲ್ಲಿ ದ್ವಿಚಕ್ರ ವಾಹನಗಳನ್ನು ತೂರಿಸುವುದರಿಂದಲೂ ಅಪಘಾತಗಳಾಗುತ್ತಿವೆ. ಇದರ ವಿನ್ಯಾಸವನ್ನು ಸ್ವಲ್ಪ ಓರೆಯಾಗಿ ಬದಲಿಸಿದರೆ ಈ ಅಪಘಾತಗಳನ್ನು ತಪ್ಪಿಸಬಹುದು.

ಕುಂದಾಪುರದ ಅನಂತರ
ರಾ. ಹೆ. 66ರಲ್ಲಿ ಕುಂದಾಪುರದಿಂದ ಬೈಂದೂರುವರೆಗೆ ಹೇರಿಕುದ್ರು ಸೇತುವೆ, ಹೇರಿಕುದ್ರು ಅಂಡರ್‌ಪಾಸ್‌, ತಲ್ಲೂರು ಹೊಸ ಸೇತುವೆಗಳಲ್ಲಿ ವಾಹನಗಳ ಓಡಾಟ ಆರಂಭಿಸಿವೆ. ಕೆಲವೆಡೆ ಕಾಮಗಾರಿ ಇನ್ನೂ ಆಮೆಗತಿಯಲ್ಲಿದೆ.

ತಂಗುದಾಣ ಇಲ್ಲ
ಹೇರಿಕುದ್ರುವಿನಲ್ಲಿ ಬಸ್‌ ತಂಗುದಾಣ ಇಲ್ಲ. ಅಂಡರ್‌ಪಾಸ್‌ ಇದ್ದರೂ ಸಂಪರ್ಕ ರಸ್ತೆ ಅಪಾಯಕಾರಿಯಾಗಿದೆ. ಜಾಲಾಡಿ ಬಳಿ ರಸ್ತೆಯನ್ನು ಅನಾವಶ್ಯಕ ಎತ್ತರಿಸಲಾಗಿದೆ. ತಲ್ಲೂರಿನ ಜಂಕ್ಷನ್‌ನಲ್ಲಿ ಹೊಸ ವಿನ್ಯಾಸ ಮಾಡಲಾಗಿದ್ದರೂ ಕೊಲ್ಲೂರು ಸಂಪರ್ಕ ಕಲ್ಪಿಸುವ ಹೆಮ್ಮಾಡಿಯಲ್ಲಿ ಅಂತಹ ಪ್ರಯತ್ನ ನಡೆದಿಲ್ಲ.

189 ಕಿಮೀ ಕಾಮಗಾರಿ
28 ವರ್ಷಗಳ ಕಾಲ ಕುಂದಾಪುರ -ಹೊನ್ನಾವರ ರಸ್ತೆ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪರ್ಸ್‌ ಇಂಡಿಯಾ ಕಂಪೆನಿ ಅಧೀನದಲ್ಲಿ ಇರಲಿದ್ದು, ಅಲ್ಲಿವರೆಗೆ ಟೋಲ್‌ ಸಂಗ್ರಹ ನಡೆಸಲಿದೆ. 2013ರ ಮೇ 25ಕ್ಕೆ ಐಆರ್‌ಬಿಗೆ ಕುಂದಾಪುರದಿಂದ 189.6 ಕಿಮೀ. ಚತುಷ್ಪಥ ರಸ್ತೆಗೆ 2,639 ಕೋ.ರೂ.ಗಳಿಗೆ ಗುತ್ತಿಗೆ ಮಂಜೂರಾಗಿದೆ. 3 ಕಡೆ ಅಂಡರ್‌ಪಾಸ್‌, 53 ಕಡೆ ಬಸ್‌ ತಂಗುದಾಣ, 3 ರೈಲ್ವೇ ಮೇಲ್ಸೇತುವೆ, 39 ಕಿರು- 14 ದೊಡ್ಡ ಸೇತುವೆಗಳು, 61.2 ಕಿ.ಮೀ. ಸರ್ವಿಸ್‌ ರಸ್ತೆ, 9 ಕಡೆ ಪಾದಚಾರಿ ಅಂಡರ್‌ಪಾಸ್‌ಗಳು, 4 ಫ್ಲೈಓವರ್‌ ಗಳು, 23 ದೊಡ್ಡ ಕೂಡುರಸ್ತೆಗಳ ನಿರ್ಮಾಣ ಆಗಬೇಕಿದೆ. ಜತೆಗೆ 3 ಕಡೆ ಟೋಲ್‌ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ.

– ಕುಂದಾಪುರ ಟೀಮ್

Advertisement

Udayavani is now on Telegram. Click here to join our channel and stay updated with the latest news.

Next