Advertisement

ಸರ್ವಿಸ್‌-ಸಿಟಿ ಬಸ್‌ ನಿಲ್ದಾಣ: ನನೆಗುದಿಗೆ ಬಿದ್ದ ಅಂಡರ್‌ ಪಾಸ್‌ ಯೋಜನೆ

12:08 PM Oct 19, 2019 | sudhir |

ಉಡುಪಿ: ನಗರದ ಸಾರಿಗೆ ವ್ಯವಸ್ಥೆ ಬೆಳೆಯುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚಾರ ಬವಣೆ ಇಕ್ಕಟ್ಟಾಗಿ ಪರಿಣಮಿಸಿದೆ. ಮುಖ್ಯವಾಗಿ ನಗರದ ಸರ್ವಿಸ್‌ ಬಸ್‌ನಿಲ್ದಾಣದಿಂದ ಸಿಟಿ ಬಸ್‌ ನಿಲ್ದಾಣಕ್ಕೆ ಸಂಪರ್ಕಿಸುವ ಕೆಳ ಸೇತುವೆ ಪ್ರಸ್ತಾವನೆ ದಶಕದಿಂದ ನನೆಗುದಿಗೆ ಬಿದ್ದ ಪರಿಣಾಮ ವಾಹನದಟ್ಟಣೆಯಿಂದ ಪ್ರಯಾಣಿಕರು ರಸ್ತೆದಾಟಲು ಪರದಾಡುತ್ತಿದ್ದಾರೆ.

Advertisement

ಸರ್ವಿಸ್‌ ಬಸ್‌ ನಿಲ್ದಾಣ, ಸಿಟಿ ಬಸ್‌ ನಿಲ್ದಾಣದ ಜತೆಗೆ ನರ್ಮ್ ಬಸ್‌ ನಿಲ್ದಾಣವೂ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಮೂರು ನಿಲ್ದಾಣಗಳಿಂದ ಬರುವ ಬಸ್‌ಗಳು ಅಶ್ವತ್ಥಕಟ್ಟೆ ಸರ್ಕಲ್‌ ಬಳಿ ಸಂಧಿಸುತ್ತವೆ. ಜತೆಗೆ ಮಂಗಳೂರಿನಿಂದ ಆಗಮಿಸುವ ಸರ್ವಿಸ್‌ ಮತ್ತು ಎಕ್ಸ್‌ಪ್ರೆಸ್‌ ಬಸ್‌ಗಳು, ಕರಾವಳಿ ಬೈಪಾಸ್‌ ಕಡೆಯಿಂದ ಆಗಮಿಸುವ ವಾಹನಗಳು ಎಲ್ಲವೂ ಒಂದೇ ಕಡೆಯಿಂದ ನಗರಕ್ಕೆ ಪ್ರವೇಶಿಸುವುದರಿಂದ ಪಾದಚಾರಿಗಳು ಪ್ರಯಾಣಿಸುವುದೇ ಅಪಾಯಕಾರಿಯಾಗಿದೆ. ಇದಲ್ಲದೆ ಕಾರು, ಬೈಕ್‌ ಚಾಲಕರ ಅಡ್ಡಾದಿಡ್ಡಿ ಓಡಾಟದಿಂದ ಜನರು ರಸ್ತೆಯಲ್ಲಿ ಓಡಾಡುವುದೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸಾರ್ವಜನಿಕರಿಗೆ ಅಂಡರ್‌ಪಾಸ್‌ ಅಥವಾ ಮೇಲ್ಸೇತುವೆ ಆಗಲೇಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.

ಅಂಡರ್‌ಪಾಸ್‌ಗೆ ಜಾಗದ ಕೊರತೆ?
2009-10ರಲ್ಲಿ ಸಿಟಿ ಬಸ್‌ ನಿಲ್ದಾಣಕ್ಕೆ ಸರ್ವಿಸ್‌ ಬಸ್‌ನಿಲ್ದಾಣದಿಂದ ಅಂಡರ್‌ಪಾಸ್‌ ನಿರ್ಮಾಣ ಮಾಡುವ ಬಗ್ಗೆ ನಗರಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದರು. ಬಳಿಕ ಸ್ಥಳ ಪರಿಶೀಲನೆ ನಡೆಸಲಾಗಿದ್ದರೂ ಜಾಗದ ಕೊರತೆಯಿಂದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. 3 ವರ್ಷಗಳ ಹಿಂದೆ ಸರ್ವಿಸ್‌ ಬಸ್‌ ನಿಲ್ದಾಣದ ಕ್ಲಾಕ್‌ ಟವರ್‌ನಿಂದ ಸಿಟಿ ಬಸ್‌ ನಿಲ್ದಾಣದವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಅಂದಿನ ಆಡಳಿತವನ್ನು ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದ್ದರು. ಚುನಾವಣೆ ಬಂದ ಬಳಿಕ ಈ ವಿಚಾರ ಮರೆತುಹೋಗಿತ್ತು. ಆದರೆ ಇದೀಗ ನರ್ಮ್ ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುತ್ತಿರುವುದರಿಂದ ಅಕ್ಕಪಕ್ಕದಲ್ಲಿರುವ ಮೂರು ನಿಲ್ದಾಣಗಳಿಗೆ ಹೊಸದಾಗಿ ಪ್ರತ್ಯೇಕ ಸಂಪರ್ಕ ವ್ಯವಸ್ಥೆ ಬಗ್ಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ.

ಅತೀ ಅವಶ್ಯ
ಸರ್ವಿಸ್‌ ಬಸ್‌ ನಿಲ್ದಾಣದಿಂದ ಸಿಟಿ ಬಸ್‌ ನಿಲ್ದಾಣಕ್ಕೆ ಪಾದಚಾರಿಗಳಿಗೆ ಫ‌ುಟ್‌ಪಾತ್‌ ವ್ಯವಸ್ಥೆಯೂ ಇಲ್ಲ. ಇಲ್ಲಿನ ಅವೈಜ್ಞಾನಿಕ ಸಂಚಾರ ನಿಯಮದಿಂದ ಜನರಿಗೆ ದಿನನಿತ್ಯ ತೊಂದರೆಯುಂಟಾಗುತ್ತಿದೆ. ನಿತ್ಯ ಸಣ್ಣಪುಟ್ಟ ಅಪಘಾತಗಳು, ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿವೆ. ವಾಹನ ದಟ್ಟನೆ ಹೆಚ್ಚಾಗುತ್ತಿರುವುದರಿಂದ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಮೇಲ್ಸೇತುವೆ ಅತೀ ಅಗತ್ಯವಾಗಿ ನಿರ್ಮಿಸಬೇಕಿದೆ.

ಗಮನಹರಿಸಲಾಗುವುದು
ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಾಣದ ಸಮೀಕ್ಷೆ ನಡೆದಿತ್ತು. ಆದರೆ ಯೋಜನೆ ಕಾರ್ಯಸಾಧುವಲ್ಲ ಎಂಬ ವರದಿಯಿಂದ ಹಿನ್ನಡೆಯುಂಟಾಯಿತು. ಸಿಟಿ ಬಸ್‌ ನಿಲ್ದಾಣದಿಂದ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಎಕ್ಸಲೇಟರ್‌ ವ್ಯವಸ್ಥೆ ಅಳವಡಿಸಬಹುದೇ ಹೊರತು ಮೇಲ್ಸೇತುವೆಗೆ ಜನರು ಹತ್ತಿ ಇಳಿಯುವುದು ಪ್ರಯಾಸಕರ. ಸಿಟಿ ಬಸ್‌ ನಿಲ್ದಾಣದ ಅಭಿವೃದ್ಧಿಯ ಸಂದರ್ಭದಲ್ಲಿ ಈ ಬಗ್ಗೆ ಗಮನಹರಿಸಲಾಗುವುದು.
-ಗಣೇಶ್‌ ಕೆ., ಹಿರಿಯ ಅಭಿಯಂತರರು, ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next