ಹೊಸದಿಲ್ಲಿ : ನಿಮಗೆ ಹೊಟೇಲ್‌ನಲ್ಲಿ ಕೊಟ್ಟ ಊಟ ತಿಂಡಿ ಅಥವಾ ಅಲ್ಲಿನ ಸೇವೆ ಇಷ್ಟವಾಗದಿದ್ದರೆ ನೀವು ನಿಮ್ಮ ಮುದ್ರಿತ ಬಿಲ್‌ನಲ್ಲಿ ತೋರಿಸಲಾಗಿರುವ ಸೇವಾ ಶುಲ್ಕವನ್ನು ಪಾವತಿಸುವುದಕ್ಕೆ ನಿರಾಕರಿಸಬಹುದು ಎಂದು ಸರಕಾರ ಹೇಳಿದೆ.
ಹೊಟೇಲಿನವರು ಟಿಪ್ಸ್ ಬದಲಿಗೆ, ತಮ್ಮ ಸೇವಾ ಗುಣಮಟ್ಟವನ್ನು ಲೆಕ್ಕಿಸದೆ, ಶೇ.5ರಿಂದ 20ರಷ್ಟು ಸೇವಾ ತೆರಿಗೆಯನ್ನು ವಿಧಿಸುತ್ತವೆ ಎಂಬ ಬಗ್ಗೆ ಗ್ರಾಹಕರಿಂದ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರಕಾರ, ‘ಸೇವಾ ಶುಲ್ಕ ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ’ ಎಂದು ಸ್ಪಷ್ಟಪಡಿಸಿದೆ. ಸರಕಾರದ ಈ ಸ್ಪಷ್ಟನೆಯಿಂದ ಹೊಟೇಲ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಹಿಯಾದ ಸುದ್ದಿ ದೊರಕಿದಂತಾಗಿದೆ.
ವ್ಯಾಪಾರಸ್ಥರು ಮಾರಾಟವನ್ನು ಉತ್ತೇಜಿಸಲು, ಯಾವುದೇ ಸೇವೆಗಾಗಿ ಅಥವಾ ಯಾವುದೇ ಉತ್ಪನ್ನಗಳ ಪೂರೈಕೆಗಾಗಿ ಅನುಚಿತವಾದ ಕ್ರಮವನ್ನು ಅನುಸರಿಸಿದಲ್ಲಿ ಅದರಿಂದ ಸಂತ್ರಸ್ತ್ರ ರಾಗುವ ಗ್ರಾಹಕರು 1986ರ ಗ್ರಾಹಕ ಹಿತರಕ್ಷಣಾ ಕಾಯಿದೆಯಡಿ ಸೂಕ್ತವಾದ ವೇದಿಕೆಗಳಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಲು ಮುಂದಾಗಬಹುದಾಗಿದೆ.
ಈ ಕಾಯಿದೆಗೆ ಅನುಸಾರವಾಗಿ ಸರಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಭಾರತೀಯ ಹೊಟೇಲ್ ಸಂಘದವರಿಂದ ಸ್ಪಷ್ಟೀಕರಣವನ್ನು ಕೇಳಿದಾಗ ಅದಕ್ಕೆ ಉತ್ತರವಾಗಿ ಸಂಘವು, ಸೇವಾ ಶುಲ್ಕ ಹೇರುವುದು ಸಂಪೂರ್ಣವಾಗಿ ಅವರವರ ವಿವೇಚನೆಗೆ ಬಿಡಲಾಗಿರುವುದರಿಂದ ಅದನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಗ್ರಾಹಕರಿಗೆ ಬಿಟ್ಟ ವಿಚಾರವೆಂದು ತಿಳಿಯತಕ್ಕದ್ದು ಎಂಬುದಾಗಿ ಉತ್ತರಿಸಿದೆ.
ಅಂತೆಯೇ ಕೇಂದ್ರ ಸರಕಾರ ಈ ಸಂಬಂಧ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿ, “ರಾಜ್ಯಗಳಲ್ಲಿನ ಎಲ್ಲ ಕಂಪೆನಿಗಳು, ಹೊಟೇಲುಗಳು ಮತ್ತು ರೆಸ್ಟೋರೆಂಟ್‌ಗಳಿಗೆ 1986ರ ಗ್ರಾಹಕ ಹಿತರಕ್ಷಣಾ ಕಾಯಿದೆಯ ಈ ಅಂಶಗಳ ಬಗ್ಗೆ ಸೂಕ್ಷ್ಮತೆ ಮತ್ತು ಅರಿವನ್ನು ಮೂಡಿಸಬೇಕು’ ಎಂದು ರಾಜ್ಯ ಸರಕಾರಗಳನ್ನು ಕೇಳಿಕೊಂಡಿದೆ.
ಆದುದರಿಂದ ಮುಂದಿನ ಬಾರಿ ನೀವು ಹೊಟೇಲುಗಳಿಗೆ, ರೆಸ್ಟೋರೆಂಟ್‌ಗಳಿಗೆ ಹೋದಾಗ ಅಲ್ಲಿ ನಿಮಗೆ ಅಹಿತಕರ ಅನುಭವವಾದಲ್ಲಿ ನೀವು ನಿಮ್ಮ ಮುದ್ರಿತ ಬಿಲ್‌ನಲ್ಲಿ ನಮೂದಿಸಲ್ಪಟ್ಟ ಸೇವಾ ಶುಲ್ಕವನ್ನು ತೆರಲು ನಿರಾಕರಿಸಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ !