ಬೆಂಗಳೂರು: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವಲಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಜತೆಗೂಡಿ ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಗ್ರಾಮ ಪಂಚಾಯಿತಿಗಳಲ್ಲಿ “ಸೇವಾ ಕೇಂದ್ರ’ ತೆರೆಯಲು ಯೋಜನೆ ರೂಪಿಸಲಾಗಿದೆ.
ಈ ಸೇವಾ ಕೇಂದ್ರಗಳಲ್ಲಿ ಸಣ್ಣ ಪ್ರಮಾಣದ ಮತ್ತು ತೀರಾ ಪ್ರಾಥಮಿಕ ಹಂತದ ಸೇವೆಗಳು ಲಭ್ಯವಾಗಲಿವೆ. ಉದಾಹರಣೆಗೆ, ಈ ಸೇವಾ ಕೇಂದ್ರಗಳಲ್ಲಿ ಗ್ರಾಮೀಣ ಭಾಗದ ಜನರು ಬ್ಯಾಂಕಿಗೆ ಹಣ ಜಮೆ ಮಾಡುವ, ಹಣ ಡ್ರಾ ಮಾಡಿಕೊಳ್ಳುವ ಮತ್ತು ಸಾಲ ಹಾಗೂ ಇತರೆ ಬ್ಯಾಂಕಿಂಗ್ ಸೌಲಭ್ಯಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಬ್ಯಾಂಕಿಂಗ್ ಸೌಲಭ್ಯ ಇಲ್ಲದ ಗ್ರಾಮ ಪಂಚಾಯಿತಿಗಳಲ್ಲಿ ಸೇವಾ ಕೇಂದ್ರ ತೆರಯುವ ಮೂಲಕ ಬ್ಯಾಂಕು ಸೇವೆಗಳಿಂದ ವಂಚಿತರಾಗಿರುವ ಗ್ರಾಮೀಣ ಭಾಗದ ಜನರಿಗೆ ಅವರ ಹಳ್ಳಿಗಳಲ್ಲೇ ಸಣ್ಣ ಪ್ರಮಾಣದ ಬ್ಯಾಂಕಿಂಗ್ ಸೇವೆ ಒದಗಿಸಲು “ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ’ (ಎಸ್‌ಎಲ್‌ಬಿಸಿ) ತೀರ್ಮಾನಿಸಿ, ಅದರಂತೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸ್ಥಳಾವಕಾಶ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮನವಿ ಮಾಡಿದೆ.
ಇದಕ್ಕೆ ಸ್ಪಂದಿಸಿ “ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸಣ್ಣ ಪ್ರಮಾಣದ ಬ್ಯಾಂಕಿಂಗ್ ಸೇವೆಗಳನ್ನು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಒದಗಿಸುವ ನಿಟ್ಟಿನಲ್ಲಿ, ಈ ಸೇವೆಗಳನ್ನು ಒದಗಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಬ್ಯಾಂಕುಗಳಿಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೂಕ್ತ ಸ್ಥಳ ಹಾಗೂ ಅಗತ್ಯ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸಾರ್ವಜನಿಕರು ಸಣ್ಣ ಪ್ರಮಾಣದ ಬ್ಯಾಂಕ್ ವ್ಯವಹಾರಗಳಿಗೆ ನಗರಗ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಭೇಟಿ ನೀಡದೆ “ಮೈಕ್ರೋ ಎಟಿಂ’ ತಂತ್ರಜ್ಞಾನದ ಮೂಲಕ ತಮ್ಮ ಗ್ರಾಮಗಳಲ್ಲಿಯೇ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಸೇವೆಯನ್ನು ಬ್ಯಾಂಕುಗಳು ಗ್ರಾಮ ಮಟ್ಟದಲ್ಲಿ ಒದಗಿಸುತ್ತಿದ್ದು, ಇದಕ್ಕಾಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಲು ಬ್ಯಾಂಕರುಗಳ ಸಮಿತಿ ಮನವಿ ಮಾಡಿತ್ತು. ಅದರಂತೆ, ಬ್ಯಾಂಕಿಂಗ್ ಸೇವೆ ಇಲ್ಲದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ, ಆಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಳಾವಕಾಶ ನೀಡಲು ಗ್ರಾಮೀಣಾಭಿವೃದ್ದಿ ಇಲಾಖೆ ಮುಂದಾಗಿದೆ. ಸ್ಥಳಾವಕಾಶ ಲಭ್ಯವಾಗುವ ಎಲ್ಲ ಕಡೆಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಬ್ಯಾಂಕರುಗಳ ಸಮಿತಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
2 ಸಾವಿರ ಕೇಂದ್ರಗಳು?
ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಸೌಲಭ್ಯ ಸಿಗುವಂತಾಗಬೇಕು ಅನ್ನುವುದು ಸರ್ಕಾರದ ಉದ್ದೇಶ. ಆದರೆ, ಅನೇಕ ಕಡೆ ಬ್ಯಾಂಕಿಂಗ್ ಸೌಲಭ್ಯ ಇಲ್ಲ. ಹಾಗಾಂತ ಬ್ಯಾಂಕುಗಳಿಲ್ಲದ ಎಲ್ಲ ಗ್ರಾಮಗಳಲ್ಲಿ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಬ್ಯಾಂಕು ತೆರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಬ್ಯಾಂಕಿಂಗ್ ಸೇವೆಗಳ ಲಭ್ಯವಿಲ್ಲದ ಗ್ರಾಮಗಳಲ್ಲಿ ಸೇವಾ ಕೇಂದ್ರ ಅಥವಾ ವಿಸ್ತರಣಾ ಕೇಂದ್ರಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಬೇಕು. ಗ್ರಾಮೀಣ ಜನರ ಅನುಕೂಲತೆಯ ದೃಷ್ಟಿಯಿಂದ ಬ್ಯಾಂಕರುಗಳ ಸಮಿತಿ ಮನವಿಗೆ ಇಲಾಖೆ ಕೈಜೋಡಿಸಿದ್ದು, ಸೇವಾ ಕೇಂದ್ರಗಳನ್ನು ತೆರೆಯಲು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸ್ಥಳಾವಕಾಶ ಒದಗಿಸಲು ತೀರ್ಮಾನಿಸಲಾಗಿದೆ. ಅಂದಾಜು 2 ಸಾವಿರ ಸೇವಾ ಕೇಂದ್ರಗಳಾಗಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
“ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ ತೀರ್ಮಾನದಂತೆ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿಲ್ಲದ ಗ್ರಾಮಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆಯಲು ಸ್ಥಳಾವಕಾಶದ ಜೊತೆಗೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’.
– ಎಂ.ಕೆ. ಕೆಂಪೇಗೌಡ, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಇಲಾಖೆ.
– ರಫೀಕ್ ಅಹ್ಮದ್