Advertisement

ಸಂಚಾರ ನಿಯಮ ಉಲ್ಲಂಘನೆ: ಆನ್‌ಲೈನ್‌ ದಂಡ ಪಾವತಿಗೆ ಸಂಕಷ್ಟ!

04:34 AM Mar 20, 2019 | |

ಮಹಾನಗರ: ನಗರದ ಯಾವುದೇ ಭಾಗಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲಿ ತತ್‌ಕ್ಷಣ ಮನೆಗೆ ನೋಟಿಸ್‌ ಬರುತ್ತಿದ್ದು, ಇದನ್ನು ಆನ್‌ಲೈನ್‌ನಲ್ಲಿ ಕಟ್ಟಬಹುದು ಎಂದು ನಿರಾಳವಾಗುವಂತಿಲ್ಲ. ಯಾಕೆಂದರೆ ನೋಟಿಸ್‌ನಲ್ಲಿ ನಮೂದಿಸಲಾದ ವೆಬ್‌ಸೈಟ್‌ ಕಾರ್ಯಾಚರಿಸುತ್ತಿಲ್ಲ ಮಾತ್ರ ವಲ್ಲ ಈ ವೆಬ್‌ ಸೈ ಟ್‌ ನಲ್ಲಿ ಆನ್‌ ಲೈನ್‌ ನಲ್ಲಿ ಪಾವತಿ ಮಾಡಬಹುದಾದ ವ್ಯವಸ್ಥೆಯೇ ಇಲ್ಲ.

Advertisement

ಹೆಲ್ಮೆಟ್‌ ಹಾಕದೆ, ಸೀಟ್‌ ಬೆಲ್ಟ್ ಧರಿಸದೆ ಅಥವಾ ತ್ರಿಬಲ್‌ ರೈಡ್‌, ದೋಷಯುಕ್ತ ನಂಬರ್‌ ಪ್ಲೇಟ್‌ ಅಳವಡಿಸಿ ವಾಹನ ಚಲಾಯಿಸುವವರು ಪೊಲೀಸರ ಕಣ್ತಪ್ಪಿಸಿ ಪಾರಾಗುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರಂಭಿಸಲಾದ ಆಟೋಮೇಷನ್‌ ಸೆಂಟರ್‌ ಮೂಲಕ ವಾಹನಗಳ ಮಾಹಿತಿ ತತ್‌ಕ್ಷಣ ಲಭಿಸುತ್ತಿದೆ. ಇದರಿಂದ ಆ ವಾಹನದ ಮಾಲಕರಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ನೋಟಿಸ್‌ ದೊರೆತ ಏಳು ದಿನಗಳೊಳಗಾಗಿ ದಂಡ ಪಾವತಿಸಬೇಕಾಗಿದೆ. ದಂಡ ಪಾವತಿಸಲು ಸ್ಥಳೀಯ ಸಂಚಾರಿ ಪೊಲೀಸ್‌ ಠಾಣೆಗಳು ಅಥವಾ ಮಂಗಳೂರು ಒನ್‌ಗೆ ತೆರಳಬೇಕು. ಆದರೆ ನೋಟಿಸ್‌ನಲ್ಲಿ ನಮೂದಿಸಲಾದ ಆನ್‌ಲೈನ್‌ ವೆಬ್‌ಸೈಟ್‌ (www.mangalore.gov.in) ಮಾತ್ರ ಕಾರ್ಯಾಚರಿಸುತ್ತಿಲ್ಲ. ಹಲವಾರು ತಿಂಗಳುಗಳಿಂದ ಈ ವೆಬ್‌ ಸೈಟ್‌ ಲಾಗಿನ್‌ ಮಾಡಲು ಹೋದರೆ ದಿನದ 24 ಗಂಟೆಯೂ ಸರ್ವರ್‌ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ನೋಟಿಸ್‌ನಲ್ಲಿ ಮಾತ್ರ ಆನ್‌ಲೈನ್‌
ಸಂಚಾರ ನಿಯಮ ಉಲ್ಲಂ ಸಿದರೆ ನಿರ್ದಿಷ್ಟ ಸಮಯದಲ್ಲಿ ದಂಡ ಪಾವತಿಸಲು ವಿಫಲವಾದಲ್ಲಿ ವಾಹನಕಾಯ್ದೆ 1988ರ ಕಲಂ 187ರ ಪ್ರಕಾರ 3 ತಿಂಗಳವರೆಗೆ ಕಾರಾಗೃಹವಾಸ ಅಥವಾ 500 ರೂ. ಗಳವರೆಗೆ ದಂಡ ಎರಡರಿಂದಲೂ ಶಿಕ್ಷಿಸಲ್ಪಡುತ್ತದೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ. ಒಂದು ವೇಳೆ ಹೊರ ರಾಜ್ಯಗಳಲ್ಲಿ ನೋಂದಣಿಗೊಂಡ ವಾಹನ ಮಂಗಳೂರಿಗೆ ಬಂದು ಸಂಚಾರಿ ನಿಯಮ ಉಲ್ಲಂಘಿಸಿದರೆ, ಅವರ ವಿಳಾಸಕ್ಕೆ ನೋಟಿಸ್‌ ಹೋಗುತ್ತದೆ. ಆದರೆ ಅವರು ಇಲ್ಲಿಗೆ ಬಂದು ದಂಡ ಪಾವತಿಸುವುದು ಬಹಳ ಕಷ್ಟದ ವಿಷಯ.

ನಗರ ವ್ಯಾಪ್ತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ನೋಟಿಸ್‌ ಬಂದರೆ ಅದನ್ನು ಟ್ರಾಫಿಕ್‌ ಪೂರ್ವ ಪೊಲೀಸ್‌ ಠಾಣೆ ಕದ್ರಿ, ಟ್ರಾಫಿಕ್‌ ಪಶ್ಚಿಮ ಪೊಲೀಸ್‌ ಠಾಣೆ ಪಾಂಡೇಶ್ವರ, ಟ್ರಾಫಿಕ್‌ ಉತ್ತರ ಪೊಲೀಸ್‌ ಠಾಣೆ ಸುರತ್ಕಲ್‌, ಟ್ರಾಫಿಕ್‌ ದಕ್ಷಿಣ ಪೊಲೀಸ್‌ ಠಾಣಾ ನಾಗುರಿ ಮತ್ತು ಮಂಗಳೂರು ಒನ್‌ ಕೇಂದ್ರಗಳಲ್ಲಿ ಕಟ್ಟಬಹುದಾಗಿದೆ.

ಸೆಂಟರ್‌ ಎಲ್ಲಿದೆ ?
ಆಟೋಮೇಷನ್‌ ಸೆಂಟರ್‌ ನಗರದ ಕದ್ರಿಯಲ್ಲಿರುವ ಸಂಚಾರ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಪ್ರಮುಖ ಭಾಗಗಳಾದ ಕಣ್ಣೂರು, ಉಳ್ಳಾಲ, ಬೋಂದೆಲ್‌, ಕಾವೂರು, ವಾಮಂಜೂರು ಮುಂತಾದೆಡೆಗಳಲ್ಲಿ 92ಎಚ್‌ಡಿ ಕೆಮರಾಗಳನ್ನು ಅಳವಡಿಸಲಾಗಿದೆ. 

Advertisement

 ಪರಿಶೀಲಿಸಲಾಗುವುದು
ಸಂಚಾರಿ ನಿಯಮ ಉಲ್ಲಂಸಿದವರಿಗೆ ಈಗ ಸಂಚಾರಿ ಪೊಲೀಸ್‌ ಠಾಣೆ ಮತ್ತು ಮಂಗಳೂರು ಒನ್‌ಗಳಲ್ಲಿ ದಂಡ ಪಾವತಿಸಲು ಅವಕಾಶವಿದೆ. ಆನ್‌ಲೈನ್‌ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.
 -ಉಮಾ ಪ್ರಶಾಂತ್‌,
ಡಿಸಿಪಿ ಅಪರಾಧ ಮತ್ತು ಸಂಚಾರ ವಿಭಾಗ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next