Advertisement

ಸರ್ವರ್‌ ಸಮಸ್ಯೆ ನೆಪ; ಗ್ರಾಹಕರಿಂದ ತರಾಟೆ

09:12 PM Jul 05, 2019 | mahesh |

ವೇಣೂರು: ಸರ್ವರ್‌ ಸಮಸ್ಯೆ ನೆಪವೊಡ್ಡಿ ಪಡಿತರ ಗ್ರಾಹಕರನ್ನು ಸತಾಯಿಸಿದ ಸಂಚಾರಿ ಪಡಿತರ ವಿತರಕ ರನ್ನು ತರಾಟೆಗೆ ತೆಗೆದುಕೊಂಡ ಘಟನೆ‌ ಶುಕ್ರವಾರ ಸಂಭವಿಸಿತು. ಪ್ರತಿ ತಿಂಗಳ 5 ಮತ್ತು 14ನೇ ತಾರೀಕಿಗೆ ಮೂಡುಕೋಡಿ ಗ್ರಾಮದ ಜನತೆಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಗ್ರಾಹಕರು ಬೆಳಗ್ಗೆ 7ರಿಂದ ಸರದಿ ಸಾಲಿನಲ್ಲಿ ಕಾಯುವುದು ಮಾಮೂಲಿ ಆಗಿದೆ. ಆ ದಿನ ವಾಹನದಲ್ಲಿ ಪಡಿತರ ಸಾಮಗ್ರಿ ಮುಗಿದರೆ ಮತ್ತೆ 14ನೇ ತಾರೀಕಿನವರೆಗೆ ಗ್ರಾಹಕರು ಕಾಯಬೇಕಾಗುತ್ತದೆ.

Advertisement

ಶುಕ್ರವಾರವೂ ಗ್ರಾಹಕರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ಕಾದಿದ್ದರು. ಬೆಳಗ್ಗೆ 10.30ಕ್ಕೆ ಪಡಿತರ ವಿತರಣೆ ವಾಹನ ಉಂಬೆಟ್ಟುವಿಗೆ ಬಂದಿದೆ. ಮಧ್ಯಾಹ್ನದ ವರೆಗೂ ಸರ್ವರ್‌ ಸಮಸ್ಯೆ ನೆಪವೊಡ್ಡಿ ಪಡಿತರ ವಿತರಣೆ ಮಾಡಿಲ್ಲ. ಇದರಿಂದ ಸ್ಥಳೀಯ ಜನಪ್ರತಿನಿಧಿಗಳಾದ ರಾಜೇಶ ಪೂಜಾರಿ, ಅನೂಪ್‌ ಜೆ. ಪಾಯಸ್‌, ಶಶಿಧರ ಶೆಟ್ಟಿ, ಗ್ರಾಹಕರು ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಆಹಾರ ಇಲಾಖೆಗೆ ಕರೆ ಮಾಡಿದ್ದು, ಸರ್ವರ್‌ ಲೋಪವನ್ನು ಅಲ್ಲಗಳೆದು ಮೊಬೈಲ್‌ ವೀಡಿಯೋ ಕಾಲ್‌ ಮೂಲಕ ಪಡಿತರ ವಿತರಣೆ ಮಾಡುವಂತೆ ವಿತರಕರಿಗೆ ತಿಳಿಸಿದ್ದಾರೆ. ತತ್‌ಕ್ಷಣವೇ ಸರ್ವರ್‌ ದೋಷ ಸರಿಯಾಗಿದೆ ಎಂದು ವಿತರಕರು ಉತ್ತರ ನೀಡಿ ಪಡಿತರ ವಿತರಣೆ ಮಾಡಿದ್ದಾರೆ.

ಬಸ್‌ ತಂಗುದಾಣದಲ್ಲಿ ಕಂಪ್ಯೂಟರ್‌ ಜೋಡಿಸಿ ಪಡಿತರ ವಿತರಣೆಯಿಂದ ಪ್ರಯಾಣಿಕರಿಗೂ ಗ್ರಾಹಕರು ರಸ್ತೆಯಲ್ಲೇ ಸರದಿ ಸಾಲು ನಿಲ್ಲಬೇಕಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಮೇಲಧಿಕಾರಿಗಳಿಗೆ ಕರೆ
ಮಧ್ಯಾಹ್ನದವರೆಗೂ ಪಡಿತರ ವಿತರಣೆ ಆಗದೇ ಇದ್ದಾಗ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು, ಸ್ಪಂದನೆ ಸಿಗಲಿಲ್ಲ. ಮಾಜಿ ಶಾಸಕ ಕೆ. ವಸಂತ ಬಂಗೇರರಿಗೆ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದ್ದು, ಅವರು ಆಹಾರ ಸರಬರಾಜು ಇಲಾಖೆಯ ಮೇಲಧಿ ಕಾರಿಗಳಿಗೆ ಕರೆ ಮಾಡಿ ಆನ್‌ಲೈನ್‌ ಲೈವ್‌ ವ್ಯವಸ್ಥೆ ಮಾಡಿದಾಕ್ಷಣ ಸಮಸ್ಯೆ ನಿವಾರಣೆ ಆಗಿದೆ.
-ರಮೇಶ್‌ ಆಚಾರ್ಯ ಉರಾಬೆ, ಗ್ರಾಹಕ

Advertisement

ಪಡಿತರ ವಿತರಣೆ ಕೇಂದ್ರ ಸ್ಥಾಪನೆಗೆ ಆಗ್ರಹ
ವೇಣೂರಿನಲ್ಲಿ ಪ್ರಾ. ಕೃಷಿಪತ್ತಿನ ಸಹಕಾರಿ ಸಂಘವಿದೆ. ಇಲ್ಲಿ ವೇಣೂರು, ಬಜಿರೆ, ಕರಿಮಣೇಲು ಗ್ರಾಮಸ್ಥರಿಗೆ ಪಡಿತರ ವಿತರಿಸಲಾಗುತ್ತದೆ. ಮೂಡುಕೋಡಿ, ಗುಂಡೂರಿ ಗ್ರಾಮದಲ್ಲಿ ಪಡಿತರ ವಿತರಣೆಗೆ ಕಟ್ಟಡದ ವ್ಯವಸ್ಥೆ ಇಲ್ಲ. ಬಸ್‌ತಂಗುದಾಣದಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆ. ವಿತರಕರು ಪಡಿತರ ಸಾಮಗ್ರಿ ವಾಹನವನ್ನು ಉಂಬೆಟ್ಟು ರಸ್ತೆ ಬದಿಯ ಮನೆ ಅಂಗಳದಲ್ಲಿ ನಿಲ್ಲಿಸಿ, ಕಂಪ್ಯೂಟರ್‌ ಅನ್ನು ಬಸ್‌ ತಂಗುದಾಣದಲ್ಲಿ ಅಳವಡಿಸುತ್ತಾರೆ. ಸರದಿ ಸಾಲಿನಲ್ಲಿ ಬರುವ ಗ್ರಾಹ ಕರು ಇಲ್ಲಿ ಬೆರಳಚ್ಚು ನೀಡಿ ಚೀಟಿ ಪಡೆದು ವಾಹನದಿಂದ ಸಾಮಗ್ರಿ ಪಡೆಯಬೇಕಾಗುತ್ತದೆ. ಶೀಘ್ರ ಇಲ್ಲೊಂದು ಪಡಿತರ ವಿತರಣೆ ಕೇಂದ್ರ ಸ್ಥಾಪನೆಯಾಗಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.

ಬೆರಳಚ್ಚಿನ ವ್ಯವಸ್ಥೆ
ಮೂಡುಕೋಡಿ ಗ್ರಾಮದಲ್ಲಿ ಪಡಿತರ ವಿತರಣೆಯಲ್ಲಿ ಗೊಂದಲ ಉಂಟಾಗಿದೆ ಎಂಬ ಮಾಹಿತಿ ಬಂದಾಗ ಆನ್‌ಲೈನ್‌ನಲ್ಲಿ ವಿತರಣೆಯನ್ನು ನೇರ ಸಂಪರ್ಕದಲ್ಲಿ ನೋಡಿದ್ದೇವೆ. ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ತಡವಾಗಿ ವಿತರಣೆ ಪ್ರಾರಂಭಿಸಿದ್ದು, ಗೊಂದಲಕ್ಕೆ ಕಾರಣ ಆಗಿರಬಹುದು. ಈ ಹಿಂದೆ ಮ್ಯಾನ್ಯುವಲ್‌ ಆಗಿ ವಿತರಣೆ ಮಾಡಲಾಗುತ್ತಿತ್ತು. ಈಗ ಬೆರಳಚ್ಚಿನ ವ್ಯವಸ್ಥೆ ಬಂದಿದೆ.
– ಸುನಂದಾ, ಮ್ಯಾನೇಜರ್‌, ಆಹಾರ-ನಾಗರಿಕ ಸರಬರಾಜು ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next