Advertisement

ಸರ್ವರ್‌ ಸಮಸ್ಯೆ: ಸರಕಾರಿ ಕಚೇರಿಗಳಲ್ಲಿ ಸರತಿ ಸಾಲು

12:47 AM Jul 20, 2019 | mahesh |

ಪುತ್ತೂರು: ಸಾರ್ವಜನಿಕ ಸರಕಾರಿ ಸೇವಾ ಕಚೇರಿಗಳಲ್ಲಿ ಸರ್ವರ್‌ ಡೌನ್‌ ಸಮಸ್ಯೆ ಕೆಲವು ದಿನಗಳಿಂದ ತೀವ್ರಗೊಂಡಿದ್ದು, ಅಗತ್ಯಗಳಿಗಾಗಿ ಕಚೇರಿ ಬರುವ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೆ ಹಿಂತಿರುಗುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪುತ್ತೂರು ಮಿನಿ ವಿಧಾನಸೌಧ, ಸರಕಾರಿ ಆಸ್ಪತ್ರೆ, ತಾ.ಪಂ., ತಾಲೂಕು ಕಚೇರಿ ಸಹಿತ ಎಲ್ಲ ಸರಕಾರಿ ಕಚೇರಿಗಳಲ್ಲಿ ಈ ಸಮಸ್ಯೆ ಬಿಗಡಾಯಿಸಿದೆ. ನಗರದ ಆಧಾರ್‌ ಕೇಂದ್ರದಲ್ಲಿ ಎರಡು ದಿನಗಳಿಂದ ಕೆಲವೇ ಮಂದಿಗೆ ಆಧಾರ್‌ ನೋಂದಣಿಯಾಗಿದೆ. ಖಾಸಗಿ ಸೇವಾ ಕೇಂದ್ರಗಳಲ್ಲೂ ನೋಂದಣಿ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ತಾಂತ್ರಿಕ ದೋಷ
ಪುತ್ತೂರಿನ ಹೆಚ್ಚಿನ ಸರಕಾರಿ ಕಚೇರಿಗೆ ಬಿಎಸ್ಸೆನ್ನೆಲ್ ಇಂಟರ್‌ನೆಟ್ ಇದೆ. ಅವರ ತಾಂತ್ರಿಕ ದೋಷದಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಸರಕಾರಿ ಕಚೇರಿಗಳ ಸಿಬಂದಿ ಆರೋಪಿಸಿದರೆ, ಇಲಾಖೆಗಳು ವೆಬ್‌ಸೈಟ್ ನಿರ್ವಹಣೆಗೆ ಹಾಗೂ ಇ-ತಂತ್ರಾಂಶದ ಸೇವೆಗೆ ಬಳಕೆಗೆ ಅನುಗುಣವಾಗಿ ಸರ್ವಿಸ್‌ ಪ್ರೊವೈಡರ್‌ಗೆ ಇಂತಿಷ್ಟು ಹಣ ನೀಡಬೇಕು. ನಿಗದಿಗಿಂತ ಹೆಚ್ಚುವರಿಯಾಗಿ ಇ-ತಂತ್ರಾಂಶಗಳನ್ನು ಬಳಸಿಕೊಂಡಾಗ ಸರ್ವರ್‌ ಡೌನ್‌ ಆಗುತ್ತದೆ. ಬಿಎಸ್ಸೆನ್ನೆಲ್ ಸಂಸ್ಥೆಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸೇವೆಗೆ ತೊಂದರೆ
ಸರ್ವರ್‌ ಡೌನ್‌ ಇರುವ ಕಾರಣದಿಂದ ಸರಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುವ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಕಾರ್ಡ್‌ ಮೂಲಕ ಪರಿಶೀಲನೆ ಹಾಗೂ ಇಲಾಖಾ ದಾಖಲೆಗಳ ನಮೂದೀಕರಣ ಕೆಲಸಗಳು ಸರ್ವರ್‌ ವೇಗವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ವ್ಯತ್ಯಯವಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ.

Advertisement

ನಗರಸಭಾ ಕಚೇರಿಯಲ್ಲಿ ಇ-ತಂತ್ರಾಂಶ ಸಮರ್ಪಕವಾಗಿ ಕೆಲಸ ಮಾಡದ ಕಾರಣ ನೀರಿನ ಬಿಲ್ ಪಾವತಿಗೂ ತೊಂದರೆಯಾಗಿದೆ. ಸರ್ವರ್‌ ಡೌನ್‌ ಕಾರಣಕ್ಕಾಗಿ ಪುತ್ತೂರು ಮಿನಿ ವಿಧಾನಸೌಧದೊಳಗೆ ಬಹುತೇಕ ಜನರು ಕಾದು ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯಗಳು ಕಂಡುಬಂದಿದೆ.

ಶೀಘ್ರ ಸರಿಪಡಿಸಲಾಗುವುದು
ಸರಕಾರಿ ಕಚೇರಿಗಳಲ್ಲಿ ಆಂತರಿಕ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಈ ಸರ್ವರ್‌ ಸಮಸ್ಯೆ ಇಲ್ಲ. ಆದರೆ ಸಾರ್ವಜನಿಕ ಸೇವಾ ವಿಭಾಗದಲ್ಲಿ ಮಾತ್ರ ಈ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದೆ. ಇಲಾಖೆಗಳ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಬಿಎಸ್ಸೆನ್ನೆಲ್ ನೆಟ್ವರ್ಕ್‌ ಪ್ರೊವೈಡ್‌ ಮಾಡಲಾಗುತ್ತಿದೆ. ಸರ್ವರ್‌ ಡೌನ್‌ನ ತಾಂತ್ರಿಕ ತೊಂದರೆಯ ಕುರಿತು ಸಂಬಂಧಪಟ್ಟವರಲ್ಲಿ ವಿಚಾರಿಸಿ ಶೀಘ್ರ ಸರಿಪಡಿಸಲಾಗುವುದು.
– ಅನಂತ ಶಂಕರ್‌ ತಹಶೀಲ್ದಾರ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next