ಕುಮಟಾ: ತಾಲೂಕಿನ ಮಿರ್ಜಾನ ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಯಲ್ಲಿ ಸರ್ವರ್ ಸಮಸ್ಯೆಯಿಂದ ಅಗತ್ಯ ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೇ, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತಾಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಮಿರ್ಜಾನ ಹೋಬಳಿಯಲ್ಲಿರುವ ನಾಡಕಚೇರಿಗೆ ದೀವಗಿ, ಮಿರ್ಜಾನ, ಕತಗಾಲ, ಬರ್ಗಿ, ಖಂಡಗಾರ, ಕೋಡ್ಕಣಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮದ ಗ್ರಾಮಸ್ಥರು ಬರಬೇಕಾಗಿದೆ. ಆದರೆ ನಾಡಕಚೇರಿಯಲ್ಲಿ ಇತ್ತೀಚೆಗೆ ಸರ್ವರ್ ಸಮಸ್ಯೆಯು ಜನರನ್ನು ಹೈರಾಣಾಗಿಸಿದ್ದು, ಸರ್ವರ್ ಸಮಸ್ಯೆಯಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಜನರು ಕೈಯಲ್ಲಿ ಅರ್ಜಿ ಹಿಡಿದು ಕಚೇರಿಗೆ ಬಂದರೆ ದಿನಪೂರ್ತಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಕಾದು ಕುಳಿತರೂ, ಯಾವುದೇ ಕೆಲಸವಾಗದೇ, ಮರುದಿನ ಮರಳಿ ಬರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.
ರೈತರಿಗೆ ಪಹಣಿ ಪತ್ರಿಕೆ, ಜಮೀನು ದೃಢೀಕರಣ ಪತ್ರ, ಹಕ್ಕು ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೌಲಭ್ಯ ಸೇರಿದಂತೆ ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ನಾಡಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ಅಲ್ಲಿನ ಸರ್ವರ್ ಸಮಸ್ಯೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಿಸಿದ ಇಲಾಖೆ ಕೂಡಲೇ ಎಚ್ಚೆತ್ತು, ಸಮಸ್ಯೆಗೆ ಕಡಿವಾಣ ಹಾಕಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಅನುದಿನವೂ ಸರ್ವರ್ ಡೌನ್: ನಾಡಕಚೇರಿಯಿಂದ ಜನಸಾಮಾನ್ಯರು ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ತೆರಳಿದರೆ, ಪ್ರತಿನಿತ್ಯವೂ ಸರ್ವರ್ ಡೌನ್, ಇಂಟರ್‌ನೆಟ್ ಸರಿಯಿಲ್ಲ ಎಂದು ಅಧಿಕಾರಿಗಳು ಸಾರ್ವಜನಿಕರನ್ನು ವಾಪಸ್ಸು ಕಳುಹಿಸುತ್ತಿರುವುದರಿಂದ ಸಾರ್ವಜನಿಕರು ನಾಡ ಕಚೇರಿ ಕಾರ್ಯ ವೈಖರಿ ಕುರಿತು ಬೇಸರ ವ್ಯಕ್ತಪಡಿಸಿ, ಕಂದಾಯ ಇಲಾಖೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಸಚಿವರ ಮಾತು ಕೇವಲ ಪುಸ್ತಕದಲ್ಲಿ: ರಾಜ್ಯದ ನೂತನ ಸರ್ಕಾರದಲ್ಲಿ ಕಂದಾಯ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆರ್.ಅಶೋಕ ಕಂದಾಯ ಇಲಾಖೆ ಗ್ರಾಮದೆಡೆಗೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರುವತ್ತ ಚಿಂತನೆ ನಡೆಸಿದ್ದಾರೆ. ಆದರೆ ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರಿಗೆ ಮಾತ್ರ ಯಾವುದೇ ಕೆಲಸವಾಗುತ್ತಿಲ್ಲ. ಸರ್ಕಾರದ ಸೌಲಭ್ಯ ಪಡೆಯಲು ಒಂದು ದಾಖಲೆ ನೀಡಿದರೆ, ಇದಲ್ಲ. ಇನ್ನೊಂದು ಹೇಳುತ್ತ ಒಂದು ಕಚೇರಿಯಿಂದ ಮತ್ತೂಂದು ಕಚೇರಿಗೆ ಜನಸಾಮಾನ್ಯರನ್ನು ಅಲೆದಾಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.