ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ(ಪದವಿ) ಕಾಲೇಜುಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಸರ್ವರ್ ಸಮಸ್ಯೆ ಎದುರಾಗಿದೆ.
ಕಾಲೇಜು ಶಿಕ್ಷಣ ಇಲಾಖೆ 2019-20ನೇ ಸಾಲಿಗೆ ರಾಜ್ಯದ 412 ಸರ್ಕಾರಿ ಕಾಲೇಜುಗಳ ದಾಖಲಾತಿಗೆ ಆನ್‌ಲೈನ್ ವ್ಯವಸ್ಥೆ ಕಲ್ಪಿಸಿದೆ. ವಿದ್ಯಾರ್ಥಿಗಳು ಇಲಾಖೆಯ ವೆಬ್‌ಸೈಟ್ https://dce.kar.nic.in/ನಲ್ಲಿ ದಾಖಲಾತಿ ಲಿಂಕ್ ತೆರೆದರೆ ಹೊಸ ಅರ್ಜಿ ನಮೂನೆ, ಅರ್ಜಿ ತಿದ್ದುಪಡಿ ಹಾಗೂ ಕಾಲೇಜು ಲಾಗಿನ್ ಹೀಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ.
ಹೊಸ ಅರ್ಜಿ ನಮೂನೆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಸರ್ವರ್ ಸಮಸ್ಯೆ ತೋರಿ ಸುತ್ತದೆ. ಅರ್ಜಿ ಸಲ್ಲಿಸಲು ಬೇಕಾದ ಯಾವ ಆಯ್ಕೆಯೂ ಬರುವುದಿಲ್ಲ. ಹಾಗೆಯೇ ತಿದ್ದುಪಡಿ ಅರ್ಜಿಗೂ ಲಿಂಕ್ ತೆರೆದುಕೊಳ್ಳುತ್ತಿಲ್ಲ. ಆನ್‌ಲೈನ್ ವ್ಯವಸ್ಥೆ ಸರಿಯಾಗಿ ಕಲ್ಪಿಸದೇ ಇರುವುದರಿಂದ ವಿದ್ಯಾರ್ಥಿಗಳು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ಲಿಂಕ್ ತೆರೆದು, ಅರ್ಜಿ ಸಲ್ಲಿಸಲು ಇನ್ನೊಂದು ಲಿಂಕ್ ಒಪನ್ ಆಗುವುದೇ ಇಲ್ಲ. ಅಲ್ಲದೆ, ಬಹುತೇಕ ಕಾಲೇಜುಗಳ ಎಲ್ಲ ಕೋರ್ಸ್ ಹಾಗೂ ಕಾಂಬಿನೇಷನ್ ಕೂಡ ಸೇರಿಸಿಲ್ಲ. ಆನ್‌ಲೈನ್ ಅಪೂರ್ಣ ಮಾಹಿತಿ ಇರುವುದರಿಂದ ಅರ್ಜಿ ಸಲ್ಲಿಸಬೇಕೋ ಬೇಡವೋ ಎಂಬ ಆತಂಕ ಹುಟ್ಟಿಕೊಳ್ಳುತ್ತಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.
ಆನ್‌ಲೈನ್ ಮೂಲಕ ಅರ್ಜಿ ದಾಖಲಿಸಿದರೂ, ಶುಲ್ಕ ಪಾವತಿಗೆ ಕಾಲೇಜಿಗೆ ಹೋಗಬೇಕಾಗಿದೆ. ಅಲ್ಲದೆ, ಆನ್‌ಲೈನ್ ದಾಖಲಿಸಿದ ಅರ್ಜಿ ಮಾಹಿತಿಯನ್ನು ಕಾಲೇಜಿಗೆ ನೀಡಿದ ನಂತರ ಶುಲ್ಕ ಪಾವತಿಸಿಕೊಂಡು, ಕಾಲೇಜಿನಿಂದ ಅಂತಿಮಗೊಳಿಸಿದ ನಂತರವೇ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿ ನೇರವಾಗಿ ಕಾಲೇಜಿಗೆ ಹೋಗಿ ಪ್ರವೇಶಾತಿ ಪಡೆಯಬಹುದು. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸರ್ವರ್ ಸಮಸ್ಯೆಯಿಂದ ಅರ್ಜಿ ಅಪೂರ್ಣವಾದರೆ ಅಂತಹ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬ ಆರೋಪವೂ ಕೇಳಿಬರುತ್ತದೆ.