ಆನೇಕಲ್: ನೂತನ ತಂತ್ರಜ್ಞಾನ ಮತ್ತು ಸಲಕರಣೆಗಳ ಸದುಪಯೋಗ ಪಡೆದುಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕೆಂದು ನೂತನ ವೈದ್ಯರಿಗೆ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಸಲಹೆ ನೀಡಿದರು.
ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿರುವ ಆಕ್ಸ್ ಫರ್ಡ್ ವೈದ್ಯಕೀಯ ಮಹಾ ವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ತೃತೀಯ ವರ್ಷದ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ, ರೋಗಿಗಳು ವೈದ್ಯರಲ್ಲಿ ದೇವರನ್ನು ಕಾಣುತ್ತಾರೆ. ಅವರ ನೋವು, ಅಳುವನ್ನು ನಿಮ್ಮ ನಗು ಮುಖದೊಂದಿಗೆ ಸ್ವಾಗತಿಸಿದಾಗ ಅರ್ಧ ರೋಗ ಶಮನವಾದಂತೆ. ಹೊಸ ಉಪಕರಣಗಳು ಶಸ್ತ್ರ ಚಿಕಿತ್ಸೆಯನ್ನು ತಡೆದು ಉಪಶಮನ
ನೀಡುತ್ತದೆಯಾದರೂ, ದೀರ್ಘ ಕಾಲದ ರೋಗ ತಡೆಯಲು ವೈದ್ಯರು ಹೆಚ್ಚು ಆದ್ಯತೆ ನೀಡಬೇಕಿದೆ.
ಆಧುನಿಕತೆ ರೂಢಿಸಿಕೊಂಡ ಜನ ಆಹಾರ ಪದ್ಧತಿ ಹಾಗೂ ತಮ್ಮ ದೈನಂದಿನ ಚಟುವಟಿಕೆ ಬದಲಿಸಿಕೊಳ್ಳಲು ಸಲಹೆ ನೀಡಬೇಕಿದೆ. ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲು ಮುಂದಾಗಿ ಎಂದರು.
ಗ್ರಾಮಸ್ಥರಿಗೆ ಜಾಗೃತಿ: ಆಕ್ಸ್‌ಫರ್ಡ್ ವೈದ್ಯಕೀಯ ಮಹಾ ವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಛೇರ್ಮನ್ ಡಾ. ಎಸ್‌ಎನ್ ವಿಎಲ್ ನರಸಿಂಹರಾಜು ಮಾತನಾಡಿ, ಗ್ರಾಮೀಣ ಭಾಗದ ಜನರಿಗಾಗಿ ಆಸ್ಪತ್ರೆಯನ್ನು ತೆರೆದು ಉತ್ತಮ ವೈದ್ಯಕೀಯ ಚಿಕಿತ್ಸೆ ನಿರಂತರ ನೀಡುತ್ತಿದೆ. ತಜ್ಞ ವೈದ್ಯರ ತಂಡ ಕೆಲವು ಹಳ್ಳಿಗಳಿಗೆ ತೆರಳಿ ನೀರಿನ ಪರೀಕ್ಷೆ, ಆಹಾರ ಪದ್ಧತಿ, ಪರಿಸರವನ್ನು ಅವಲೋಕಿಸಿ ಇರುವ ನ್ಯೂನತೆ ಗುರುತಿಸಿ ಗ್ರಾಮಸ್ಥರಿಗೆ ತಿಳವಳಿಕೆ
ನೀಡುವ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
250 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅವಕಾಶ:ಪ್ರಸಕ್ತ ಸಾಲಿಗೆ 150 ವಿದ್ಯಾರ್ಥಿಗಳು ಪದವಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಅವರಲ್ಲಿ ಅಶ್ಮಿತ ಮೆನನ್ 3 ಹಾಗೂ ಅಲಂಕ್ರಿತ ಅವರು 5 ಚಿನ್ನದ ಪದಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಮುಂದಿನ ಶೈಕ್ಷಣಿಕ ಸಾಲಿಗೆ 250 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶವಿದ್ದು, 69 ಸ್ನಾತಕೋತ್ತರ ಪದವಿ ಸೀಟುಗಳು ಲಭ್ಯವಿದೆ ಎಂದರು.
ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ:
ಕೋವಿಡ್ ಸಮಯದಲ್ಲಿ ಆಕ್ಸ್‌ಫೋರ್ಡ್ ಆಸ್ಪತ್ರೆಯ ಉತ್ತಮ ಸೇವೆಗಾಗಿ ಅನೇಕ ಸಂಘ ಸಂಸ್ಥೆಗಳು ಶ್ಲಾಘನೆ ಮಾಡಿದ್ದು, ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ತೃಪ್ತಿ ಇದೆ ಎಂದರು. ಡಾ.ಅಥಣಿ, ನಿರ್ದೇಶಕ ಶ್ರೀನಿವಾಸಲು ವೈ., ಪ್ರಾಂಶುಪಾಲ ಡಾ. ಎಂ.ಬಿ. ಸಾಣಿಕೋಪ್, ವೈದ್ಯಕೀಯ ಆಧೀಕ್ಷಕ ಡಾ. ಜಿ. ಮೋಹನ್ ಹಾಗೂ ಇತರರು ಇದ್ದರು.