Advertisement

“ನಂಬಿಕೆ ಬರುವಂತೆ ರೋಗಿಗಳ ಸೇವೆ ಮಾಡಿ’

03:05 PM May 25, 2017 | |

ಬೆಳ್ತಂಗಡಿ: ವೈದ್ಯಕೀಯ ಕ್ಷೇತ್ರವು ಇಂದು ವಾಣಿಜ್ಯ ಮಯ ವಾಗುತ್ತಿದೆ. ರೋಗದ ಕೋಣೆಯಲ್ಲಿ ಹಣ ಮಾಡಲು ಯತ್ನಿಸಬೇಡಿ. ರೋಗಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ನಂಬಿಕೆ ಮತ್ತು ವಿಶ್ವಾಸ ಮೂಡಿ ಬರುವಂತೆ ಶುಶ್ರೂಷೆ ನೀಡಬೇಕು. ಹಣ ಸಂಪಾದನೆಯೇ ವೈದ್ಯರ ಮುಖ್ಯ ಗುರಿಯಾಗಬಾರದು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಡಾ| ಬಿ.ಎಂ. ಹೆಗ್ಡೆ ಹೇಳಿದರು.

Advertisement

ಅವರು ಸೋಮವಾರ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಕೇಂದ್ರ ಸರಕಾರದ ಆರೋಗ್ಯ ಸೇವಾ ಇಲಾಖೆಗೆ ನೂತನವಾಗಿ ಆಯ್ಕೆಯಾದ ಬೇರೆ ಬೇರೆ ರಾಜ್ಯಗಳ ವೈದ್ಯಾಧಿಕಾರಿಗಳ ಆರು ದಿನಗಳ ಪ್ರಾಥಮಿಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ಅಹಂ ತ್ಯಜಿಸಿ ವಿನೀತರಾಗಿ ಮಾನವೀಯತೆಯೊಂದಿಗೆ ಪ್ರೀತಿ ಮತ್ತು ವಿಶ್ವಾಸದಿಂದ ರೋಗಿಗಳ ಸೇವೆ ಮಾಡಬೇಕು. ಆಧುನಿಕ ಜೀವನ ಶೈಲಿ, ಒತ್ತಡದ ಕೆಲಸಗಳು, ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಜನರು ಇಂದು ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ಹಿತ-ಮಿತ ಆಹಾರ, ಪರಿಶುದ್ಧ ಗಾಳಿ, ನೀರು ಸೇವನೆ ಮತ್ತು ಸ್ವತ್ಛ, ಪ್ರಶಾಂತ ಪ್ರಕೃತಿ – ಪರಿಸರದಿಂದ ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾ ಸಚಿವ ಯು.ಟಿ. ಖಾದರ್‌, ದೇಶದ ಎಲ್ಲ ರಾಜ್ಯಗಳಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಏಕರೂಪದ ನಿಯಮಗಳು ಇರಬೇಕು. ಈಗ ಬೇರೆ ಬೇರೆ ರಾಜ್ಯಗಳಲ್ಲಿ ನಿಯಮಗಳಲ್ಲಿ ವ್ಯತ್ಯಾಸವಿದೆ. ಆಯುರ್ವೇದ, ಯುನಾನಿ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮೊದಲಾದ ಪಾರಂಪರಿಕ ಚಿಕಿತ್ಸಾ ಕ್ರಮಗಳಿಂದ ಉತ್ತಮ ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು  ಮಾತನಾಡಿ, ವೈದ್ಯರು ತಮ್ಮ ಕರ್ತವ್ಯ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಜವಾಬ್ದಾರಿಯಿಂದ ರೋಗಿಗಳ ಸೇವೆ ಮಾಡಬೇಕು ಎಂದರು.
ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಸಂಸ್ಥೆಯ ಡಾ| ಪುಷ್ಪಾಂಜಲಿ ತರಬೇತಿಯ ಉದ್ದೇಶ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ ಶೆಟ್ಟಿ ಅವರು ಉಪಸ್ಥಿತರಿದ್ದರು. ಬೆಂಗಳೂರಿನ ಉಪನ್ಯಾಸಕ ಡಾ| ನವೀನ್‌ ಕೆ.ವಿ. ಅವರು ಸ್ವಾಗತಿಸಿದರು. ಕಾಲೇಜಿನ ಯೋಗವಿಭಾಗದ ಡೀನ್‌ ಡಾ| ಶಿವಪ್ರಸಾದ್‌ ಶೆಟ್ಟಿ ವಂದಿಸಿದರು. ಡಾ| ಶಿವಮ್‌ನಾಯ್ಕ ಮತ್ತು ಪ್ರೊ| ಜೆವೆಲ್‌ ಮಾರ್ಟಿಸ್‌ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next