ಸಿಲ್ಹಟ್: ಹಸನ್ ಮೆಹಮೂದ್ ಅವರ ಮಾರಕ ದಾಳಿಯ ನೆರವಿನಿಂದ ಬಾಂಗ್ಲಾದೇಶವು, ಐರ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು 10 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಬಾಂಗ್ಲಾದೇಶವು ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವು ಹಸನ್ ಮೆಹಮೂದ್ ಅವರ ದಾಳಿಗೆ ತತ್ತರಿಸಿ 28.1 ಓವರ್‌ಗಳಲ್ಲಿ ಕೇವಲ 101 ರನ್ನಿಗೆ ಆಲೌಟಾಯಿತು. ಹಸನ್ 32 ರನ್ನಿಗೆ 5 ವಿಕೆಟ್ ಕಿತ್ತು ಮಿಂಚಿದರು. ಇದಕ್ಕುತ್ತರವಾಗಿ ತಮೀಮ್ ಇಕ್ಬಾಲ್ ಮತ್ತು ಲಿಟನ್ ದಾಸ್ ಅವರ ಉತ್ತಮ ಆಟದಿಂದಾಗಿ ಬಾಂಗ್ಲಾದೇಶವು ಕೇವಲ 13.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 102 ರನ್ ಬಾರಿಸಿ ಜಯಭೇರಿ ಬಾರಿಸಿತು.
ಐರ್ಲೆಂಡ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ತಮೀಮ್ ಮತ್ತು ಲಿಟನ್ ದಾಸ್ ಅವರು ಯಾವುದೇ ಹಂತದಲ್ಲೂ ಒತ್ತಡಕ್ಕೆ ಒಳಗಾಗದೇ ತಂಡಕ್ಕೆ ಜಯ ತಂದುಕೊಟ್ಟರು. ತಮೀಮ್ 41 ಎಸೆತಗಳಿಂದ 41 ಹಾಗೂ ಲಿಟನ್ ದಾಸ್ 38 ಎಸೆತಗಳಿಂದ 50 ರನ್ ಗಳಿಸಿ ಅಜೇಯರಾಗಿ ಉಳಿದರು. 10 ಬೌಂಡರಿ ಬಾರಿಸಿದ್ದರು. ಸರಣಿಯ ಮೊದಲ ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿದ್ದರೆ ದ್ವಿತೀಯ ಪಂದ್ಯದಲ್ಲಿ ಮುಶ್ಫಿಕರ್ ರಹೀಮ್ ಅವರ ಬಾಂಗ್ಲಾ ಪರ ಅತೀವೇಗದ ಶತಕದ ಬಲದಿಂದ ತಂಡ ಸುಲಭವಾಗಿ ಜಯ ಸಾಧಿಸಿತ್ತು.
——————
ಸಂಕ್ಷಿಪ್ತ ಸ್ಕೋರು: ಐರ್ಲೆಂಡ್ 28.1 ಓವರ್‌ಗಳಲ್ಲಿ 101 (ಲೋರ್ಕಾನ್ ಟಕರ್ 28, ಕುರ್ಟಿಸ್ ಕ್ಯಾಂಪರ್ 36, ಹಸನ್ ಮಹಮುದ್ 32ಕ್ಕೆ 5, ಟಸ್ಕಿನ್ ಅಹ್ಮದ್ 26ಕ್ಕೆ 3, ಎಬಡಾಡ್ ಹೊಸೈನ್ 29ಕ್ಕೆ 2); ಬಾಂಗ್ಲಾದೇಶ 13.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 102 (ತಮಿಮ್ ಇಕ್ಬಾಲ್ 41 ಔಟಾಗದೆ, ಲಿಟನ್ ದಾಸ್ 50 ಔಟಾಗದೆ).