Advertisement

ಬೇಡಿಕೆಗಳ ಈಡೇರಿಕೆಗಾಗಿ ಸರಣಿ ಪ್ರತಿಭಟನೆ

12:36 PM Jun 21, 2018 | Team Udayavani |

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಷ್ಟ್ ಪಕ್ಷ, ಪಡುವಾರಹಳ್ಳಿ
ಶ್ರೀಗಂಧ ಯುವಕರ ಸಂಘ ಹಾಗೂ ರಾಜ್ಯ ಡಾ.ಬಿ.ಆರ್‌.ಅಂಬೇಡ್ಕರ್‌ ಆದಿ ದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘದ ಸದಸ್ಯರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Advertisement

ಬೆಲೆ ಏರಿಕೆಗೆ ಖಂಡನೆ: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದಿನಬಳಕೆ ವಸ್ತುಗಳು ಹಾಗೂ ತೈಲಬೆಲೆ ಏರಿಕೆ ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ಸದಸ್ಯರು ನಗರದ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. 

ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿ ನಿಂದ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವ ಭರವಸೆ ನೀಡಿ, ಇದೀಗ ಭರವಸೆ ಈಡೇರಿಸುವಲ್ಲಿ ವಿಫ‌ಲವಾಗಿದೆ. ಇದೀಗ ತೈಲಬೆಲೆಯೂ ಗಗನಕ್ಕೇರಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಲು ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಕೂಡಲೇ ದಿನಬಳಕೆ ವಸ್ತುಗಳು ಹಾಗೂ ತೈಲಬೆಲೆ ಇಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ಕಾರ್ಯದರ್ಶಿ ಎಚ್‌.ಆರ್‌. ಶೇಷಾದ್ರಿ, ಸಹ ಕಾರ್ಯದರ್ಶಿ ರಾಜು, ಎಚ್‌.ಬಿ.
ರಾಮಕೃಷ್ಣ, ಕೆ.ಎಸ್‌.ರೇವಣ್ಣ, ಸೋಮರಾಜೇ ಅರಸ್‌, ಜಗನ್ನಾಥ್‌, ಎಂ.ಶಿವಣ್ಣ ಮತ್ತಿತರರಿದ್ದರು.

ಸ್ವಾಧೀನ ಪತ್ರ ವಿತರಿಸಿ: ನರ್ಮ್ ಯೋಜನೆಯಲ್ಲಿ ನಿರ್ಮಿಸಿರುವ ಮನೆಗಳ ಸ್ಥಿತಿ ದಯನೀಯವಾಗಿದ್ದು,
ಇಲ್ಲಿನ ನಿವಾಸಿಗಳಿಗೆ ಮನೆ ವಿತರಿಸಿ ಸ್ವಾಧೀನ ಪತ್ರ, ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯಡಾ.ಬಿ.ಆರ್‌. ಅಂಬೇಡ್ಕರ್‌ ಆದಿದ್ರಾವಿಡ ಯುವಕರ ಅಭಿವೃದ್ಧಿ ಮಹಾ ಸಂಘದ ಸದಸ್ಯರು ನಗರದ ಹೈವೇ ವೃತ್ತದ ಬಳಿಯ ಸ್ಲಂ ಬೋರ್ಡ್‌ ಎದುರು ಪ್ರತಿಭಟನೆ ನಡೆಸಿದರು.

Advertisement

ನಗರದಲ್ಲಿ ಸ್ಲಂಬೋರ್ಡ್‌ ವತಿಯಿಂದ ನರ್ಮ್ ಯೋಜನೆಯಲ್ಲಿ ನಿರ್ಮಿಸಿರುವ ಮನೆಗಳು ಹಾಳಾಗಿದ್ದು, ಮೂಲ ಸೌಕರ್ಯಗಳ ಕೊರತೆ ಇದೆ. ನರ್ಮ್ ಯೋಜನೆಯಲ್ಲಿ ಕಟ್ಟಿರುವ ಮನೆಗಳ ಪೈಪ್‌ಲೈನ್‌, ನೀರಿನ ಟ್ಯಾಂಕ್‌ಗಳು ಒಡೆದಿದ್ದು, ಇದರಿಂದಾಗಿ ಇಲ್ಲಿನ ನಿವಾಸಿಗಳು ಹೊರಗಿನಿಂದ ನೀರು ತಂದು ಉಪಯೋಗಿಸುವ ಸ್ಥಿತಿ ನಿರ್ಮಾಣವಾಗಿದೆ. ಬಡಾವಣೆ ಸುತ್ತಲೂ ಅಶುಚಿತ್ವ ತಾಂಡವವಾಡುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಇತ್ತ ಗಮನವಹಿಸಿ, ಪೌರಕಾರ್ಮಿಕರು, ಬಡವರಿಗೆ ಮನೆ
ವಿತರಿಸಿ ಸ್ವಾಧೀನ ಪತ್ರ, ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ
ಎಸ್‌ಬಿಎಂ ಮಂಜು, ನಿಂಗಯ್ಯ, ಶ್ರೀನಿವಾಸಗೌಡ, ಮನೋಹರ್‌, ಫಾಲ್ಕನ್‌ ಬೋರೇಗೌಡ, ಕೃಷ್ಣ, ರಾಧಮ್ಮ,
ಜ್ಯೋತಿ, ಶ್ರೀರಂಗ ಮತ್ತಿತರರಿದ್ದರು.

ಅವ್ಯವಹಾರ ಆರೋಪ: ನಗರದ ಜಲದರ್ಶಿನಿ ಅತಿಥಿಗೃಹದ ಮುಂಭಾ ಗದ ನೇರ ರಸ್ತೆ ಕಾಮಗಾರಿಯಲ್ಲಿ
ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಸದಸ್ಯರು ಮೈಸೂರು-ಹುಣಸೂರು ಮುಖ್ಯ ರಸ್ತೆಯ ಜಲದರ್ಶಿನಿ ಅತಿಥಿ ಗೃಹದ ಎದುರು ಪ್ರತಿಭಟನೆ ನಡೆಸಿದರು. 

ಕೇಂದ್ರ ಸರ್ಕಾರದ 12.50 ಕೋಟಿ ರೂ. ಅನುದಾನದಡಿಯಲ್ಲಿ ಪಿಡಬ್ಲೂಡಿ ಇಲಾಖೆ ಜಲದರ್ಶಿನಿ ಅತಿಥಿಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್‌ವರೆಗಿನ ರಸ್ತೆಯನ್ನು ನೇರಗೊಳಿಸುವ ಕಾಮಗಾರಿ ಕೈಗೊಂಡಿದೆ. ಆದರೆ ಮೈಸೂರು ವಿವಿ ಹಾಗೂ ಮುಡಾ ಸಹಯೋಗದಲ್ಲಿ ಕೈಗೊಂಡಿರುವ ಕಾಮಗಾರಿಯಲ್ಲಿ ಎರಡು ಬದಿಯಲ್ಲಿ ರಸ್ತೆಯನ್ನು ವಿಸ್ತರಿಸಿ ನೇರಗೊಳಿಸಬೇಕಿದೆ.

ಆದರೆ ಹಾಲಿ ಇರುವ ರಸ್ತೆಯೊಂದಿಗೆ ಪಾದಚಾರಿ ಮಾರ್ಗವನ್ನು ಅಗೆದು ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ. ಆ ಮೂಲಕ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಎಂಜಿನಿಯರ್‌ಗಳು ಕೋಟ್ಯಂತರ ರೂ. ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ಪ್ರಧಾನಮಂತ್ರಿ ಕಚೇರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಲಿಖೀತ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ, ಜವರೇ ಗೌಡ, ಕೆ.ಗೋಪಿ, ಎ.ಪಿ. ರಾಜೇಶ್‌ಗೌಡ
ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next