Advertisement

ಶಿರಾಡಿ ಪರಿಸರದ  ದೇಗುಲಗಳಲ್ಲಿ  ಸರಣಿ ಕಳವು

01:05 PM Apr 13, 2017 | Harsha Rao |

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಎರಡು ದೇವಸ್ಥಾನಗಳಲ್ಲಿ ಸರಣಿ ಕಳ್ಳತನವಾಗಿದ್ದು, ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನ- ಬೆಳ್ಳಿಯ  ಸೊತ್ತನ್ನು ದೋಚಲಾಗಿದೆ.

Advertisement

ಶಿರಾಡಿ ಗ್ರಾಮದ ಅಮ್ಮಾಜೆ ದುರ್ಗಾ ಪರಮೇಶ್ವರೀ ದೇವಸ್ಥಾನ ಮತ್ತು ಕಳಪ್ಪಾರು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಕಳವು ನಡೆದಿದ್ದು, ಬುಧವಾರ ಬೆಳ‌ಗ್ಗೆ ಘಟನೆ ಬೆಳಕಿಗೆ ಬಂದಿದೆ. ಅಮ್ಮಾಜೆ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಮಂಗಳವಾರ ರಾತ್ರಿಯೂ ದುರ್ಗಾಪೂಜೆ  ನಡೆದಿದ್ದು, ದೇಗುಲದ ಭಕ್ತರು  ಮತ್ತು ವ್ಯವಸ್ಥಾಪನ ಸಮಿತಿಯವರು ತಡರಾತ್ರಿ 11 ಗಂಟೆಯವರೆಗೆ ದೇವಸ್ಥಾನದಲ್ಲಿ ಉಳಿದಿದ್ದರು. ಅನಂತರ ದೇಗುಲದಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಎದುರಿನ ಬಾಗಿಲು ಚಿಲಕವನ್ನು ಮುರಿದು ಒಳಗೆ ಪ್ರವೇಶಿಸಿದ್ದರು.

ಅಮ್ಮಾಜೆ ದೇಗುಲದಲ್ಲಿ ಸುಮಾರು 20 ಗ್ರಾಂ ದೇವರ ಚಿನ್ನದ ಮಾಲೆ, ದೇವರ ಬೆಳ್ಳಿಯ ಪ್ರಭಾವಳಿ, ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು 35 ಸಾವಿರ ರೂ.ಗಳಿಗೂ ಮೇಲ್ಪಟ್ಟು ನಗದು ದೋಚಿದ್ದಾರೆ. ದೇವರ ಬೆಳ್ಳಿಯ ಮುಖವಾಡವನ್ನು ಮಾತ್ರ ಮುಟ್ಟದೇ ಇತರ ಸೊತ್ತುಗಳನ್ನು ಕಳ್ಳರು ಒಯ್ದಿದ್ದಾರೆ. ಬೆಳಗ್ಗೆ ಎಂದಿನಂತೆ ಪೂಜೆಗೆಂದು ದೇಗುಲಕ್ಕೆ ಬಂದ ಅರ್ಚಕರಿಗೆ ಬಾಗಿಲಿನ ಚಿಲಕ ಮುರಿದಿರುವುದು ಅರಿವಾಗಿ ಒಳಗೆ ನೋಡಿದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ. 

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿರಾಡಿ ಮಂಜುನಾಥ ಗೌಡ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಮ್ಮಾಜೆಯಿಂದ 4 ಕಿ.ಮೀ. ದೂರದಲ್ಲಿರುವ ಕಳಪ್ಪಾರು ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ ವಾರ್ಷಿಕ ಜಾತ್ರೆಗೆ ಕೊಡಿ ಏರುವ ಕಾರ್ಯಕ್ರಮ ನಡೆದಿದ್ದು, ಸೋಮವಾರ  ರಾತ್ರಿ ಈ ದೇಗುಲದಲ್ಲಿ  ಗ್ರಾಮಸ್ಥರು ಮರುದಿನದ ಜಾತ್ರೆಯ ಸಿದ್ಧತೆಗೆ ಬೇಕಾಗಿ ತಡರಾತ್ರಿಯವರೆಗೆ ಕೆಲಸ  ಮಾಡಿದ್ದರು.  ಮಂಗಳವಾರ ಬೆಳಗ್ಗೆ ಕೊಡಿ ಏರಿದ ಅನಂತರ ತೆರಳಿದ್ದರು. ರಾತ್ರಿ ವೇಳೆ ಅಮ್ಮಾಜೆಯಲ್ಲಿ ಕಳ್ಳತನ ನಡೆಸಿದ ಕಳ್ಳರೇ ಇಲ್ಲಿಯೂ ಕಳ್ಳತನ ನಡೆಸಿದ ಸಾಧ್ಯತೆಯಿದೆ. 

ಈ ದೇಗುಲದಿಂದಲೂ ದೇವರ ಕಾಣಿಕೆ ಡಬ್ಬಿ ಒಡೆದು ಅಂದಾಜು 5 ಸಾವಿರ ರೂ.ಗೂ ಮೇಲ್ಪಟ್ಟು ನಗದು ದೋಚಿದ್ದಾರೆ ಎಂದು ದೇಗುಲದ ಅಧ್ಯಕ್ಷ ಡೊಂಬಯ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ ಶಿರಾಡಿ, ಧನಂಜಯ ಗೌಡ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

ದೇಗುಲದ  ಕಾಣಿಕೆ ಡಬ್ಬಿಗಳನ್ನು ಒಂದಷ್ಟು ದೂರ ಕಳ್ಳರು ಹೊತ್ತೂಯ್ದು ಕಾಡು ಗಿಡಗಳ ಮಧ್ಯೆ ಡಬ್ಬಿಯನ್ನು ಒಡೆದು ನಗದನ್ನು ಎತ್ತಿ ಡಬ್ಬಿಯನ್ನು ಬಿಟ್ಟು ಹೋಗಿದ್ದಾರೆ.

ಡಿವೈಎಸ್ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕ ಅನಿಲ್‌ ಎಸ್‌ ಕುಲಕರ್ಣಿ  ಮತ್ತು ಶ್ವಾನದಳ, ಬೆರಳಚ್ಚು ತಜ್ಞರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next