ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರು ವಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಿ.ಬಿ.ಐ., ಇ.ಡಿ., ಐ.ಟಿ. ಸಂಕಷ್ಟಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದರ ಹಿಂದೆ ಒಂದರಂತೆ ಐದು ಬಾರಿ ವಿವಿಧ ತನಿಖಾ ಸಂಸ್ಥೆಗಳು, ಕೋರ್ಟ್ ಮುಂದೆ ಡಿಕೆಶಿ ಹಾಜರಾಗಬೇಕಿದೆ.
ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿಯಾಗಿ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದೆ. ಆದರೆ ಡಿಕೆಶಿಗೆ ಇ.ಡಿ., ಸಿ.ಬಿ.ಐ. ಮತ್ತು ಐ.ಟಿ. ನೋಟಿಸ್ ನೀಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಆರೋಪಿಸಿವೆ.
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ನ. 7ರಂದು ಇ.ಡಿ. ಮುಂದೆ ಹಾಜರಾಗುವುದಕ್ಕೆ ಸಮನ್ಸ್ ಪಡೆದಿದ್ದ ಡಿ.ಕೆ. ಶಿವಕುಮಾರ್, ನ. 14ರಿಂದ 23ರ ವರೆಗೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ದಿಲ್ಲಿ, ಚೆನ್ನೈ ಹಾಗೂ ಬೆಂಗಳೂರಿನ ಸಿ.ಬಿ.ಐ., ಐ.ಟಿ. ಹಾಗೂ ಇ.ಡಿ. ವಿಶೇಷ ನ್ಯಾಯಾಲಯಗಳ ಮುಂದೆ ಹಾಜರಾಗಬೇಕಿದೆ.
ಒಂದು ದಿನ ಕೋರ್ಟ್ ಅಥವಾ ಇ.ಡಿ. ಅಥವಾ ಐ.ಟಿ. ಮುಂದೆ ಹಾಜರಾಗಬೇಕಾದರೆ ಕನಿಷ್ಠ ಮೂರ್‍ನಾಲ್ಕು ದಿನ ಮುನ್ನ ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ. ಆ ಪ್ರಕಾರ ನೋಡಿದರೆ ನವೆಂಬರ್ ಇಡೀ ತಿಂಗಳು ಡಿ.ಕೆ. ಶಿವಕುಮಾರ್ ವಿಚಾರಣೆ ಗಳಲ್ಲೇ ತಲ್ಲೀನರಾಗಬೇಕಾಗುತ್ತದೆ. ಈ ಮಧ್ಯೆ ಹೊಸ ಸಮನ್ಸ್, ನೋಟಿಸ್ ಬಂದರೆ ಇನ್ನಷ್ಟು ವಿಸ್ತರಣೆಯಾಗಬಹುದು.
ಈ ಹಿಂದೆ ಮೇಕೆದಾಟು ಪಾದಯಾತ್ರೆ ವೇಳೆಯೂ ಸಿ.ಬಿ.ಐ., ಇ.ಡಿ., ಐ.ಟಿ. ನೋಟಿಸ್ ಜಾರಿಯಾಗಿತ್ತು. ಸೆಪ್ಟಂಬರ್‌ನಲ್ಲಿ ವಿಧಾನಸಭೆ ಅಧಿವೇಶನ ನಡೆ ಯುತ್ತಿರುವಾಗಲೇ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ನೀಡಿತ್ತು. ಅನಂತರ ಭಾರತ್ ಜೋಡೋ ಯಾತ್ರೆಯ ಸಿದ್ಧತೆಯಲ್ಲಿರುವಾಗ, ಯಾತ್ರೆ ಸಾಗುತ್ತಿರುವಾಗ ಮತ್ತು ಬಳ್ಳಾರಿಯಲ್ಲಿ ನಡೆದ ಭಾರತ್ ಜೋಡೋ ಕಾರ್ಯಕ್ರಮದ ವೇಳೆಯೂ ಡಿಕೆಶಿ ಒಂದಲ್ಲ ಒಂದು ಸಮನ್ಸ್ ಎದುರಿಸಿದ್ದರು. ನ. 6ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನ ಸಮಾರಂಭ ಇತ್ತು. ನ. 7ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ನೀಡಿತ್ತು. ಈ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೆಲ್ಲವೂ ಡಿ.ಕೆ. ಶಿವಕುಮಾರ್ ಅವರನ್ನು ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿಸಿ ಚುನಾವಣ ಅಖಾಡದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಂತೆ ಕಟ್ಟಿ ಹಾಕುವ ತಂತ್ರ ಎಂದು ವಿಶ್ಲೇಷಿಸಲಾಗಿದೆ.
ಈ ತಿಂಗಳಿನಲ್ಲಿ ಹಾಜರಾಗಬೇಕಾದ ಪ್ರಕರಣಗಳು
ನ. 14 ಯಂಗ್
ಇಂಡಿಯಾ ಕೇಸ್-ದಿಲ್ಲಿ
ನ. 18-ಸಿ.ಬಿ.ಐ. ಕೇಸ್
-ಬೆಂಗಳೂರು ಹೈಕೋರ್ಟ್
ನ. 19-ಐ.ಟಿ. ಹಾಗೂ ಇತರ
ಎರಡು ಕೇಸ್-ಸಿಟಿ ಸಿವಿಲ್ ಕೋರ್ಟ್-ಬೆಂಗಳೂರು
ನ. 21-ಬೇನಾಮಿ ಕೇಸ್
– ಚೆನ್ನೈ (ವರ್ಚುವಲ್)
ನ. 23-ಇ.ಡಿ. ಕೇಸ್-ದಿಲ್ಲಿ ಹೈಕೋರ್ಟ್