Advertisement

ಉ.ಕ. ಅಭ್ಯರ್ಥಿಗಳ ಫೈನಲ್‌ಗೆ ಎಚ್‌ಡಿಕೆ ಸರಣಿ ಸಭೆ

01:07 PM Apr 27, 2017 | Harsha Rao |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ 4 ದಿನ ಸರಣಿ ಸಭೆ ನಡೆಸಲಿದ್ದಾರೆ. ಗುರುವಾರದಿಂದ ಹುಬ್ಬಳ್ಳಿಯಲ್ಲೇ ಐದು ದಿನ ವಾಸ್ತವ್ಯ ಇರಲಿರುವ ಕುಮಾರಸ್ವಾಮಿ, ವಿಧಾನಸಭೆವಾರು ಮುಖಂಡರ ಸಭೆ ನಡೆಸಿ ಈಗಾಗಲೇ ಸಿದ್ಧಗೊಂಡಿರುವ ಸಂಭಾವ್ಯ ಪಟ್ಟಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಕುರಿತು ಇತ್ತೀಚೆಗೆ ನಡೆದ ಕೋರ್‌ ಕಮಿಟಿ
ಸಭೆಯಲ್ಲಿ ಚರ್ಚಿಸಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸಲಹೆ ಮೇರೆಗೆ ಮುಖಂಡರ ಅಭಿಪ್ರಾಯ ಪಡೆಯಲು ಸಭೆ
ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಹಳೇ ಮೈಸೂರು ಕ್ಷೇತ್ರದ ಪಟ್ಟಿ ಅಂತಿಮ: ಈಗಾಗಲೇ ಹಳೇ ಮೈಸೂರು ಭಾಗದ ಕ್ಷೇತ್ರಗಳ ಪಟ್ಟಿ ಅಂತಿಮಗೊಂಡಿದ್ದು
ದೇವೇಗೌಡರ ಒಪ್ಪಿಗೆಗಾಗಿ ಸಲ್ಲಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಪಟ್ಟಿಯನ್ನು ಸಿದ್ಧಪಡಿಸಿ ದೇವೇಗೌಡರಿಗೆ
ನೀಡಲಾಗುವುದು. ಮೇ ಅಂತ್ಯದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.

ಈ ಮಧ್ಯೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಕರಾವಳಿ ಭಾಗದ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ಅಲ್ಲಿನ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳ ತಲಾಷ್‌ ನಡೆಸಿದ್ದಾರೆ. ಮಧು ಬಂಗಾರಪ್ಪ ಹಾಗೂ ಬಿ.ಎಂ.ಫ‌ರೂಕ್‌ ಅವರಿಗೆ ಆ ಭಾಗದಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ ಪಟ್ಟಿ ನೀಡುವ ಹೊಣೆಗಾರಿಕೆ ನೀಡಲಾಗಿದೆ.

ಮೇ 3ಕ್ಕೆ ಬೂತ್‌ ಕಮಿಟಿ ಸಭೆ: ಉತ್ತರ ಕರ್ನಾಟಕ ಭಾಗದ ಪ್ರವಾಸದ ನಂತರ ಮೇ 3 ರಂದು ಪಕ್ಷದ ಸಂಘಟನೆಗೆ
ರಚಿಸಲಾಗಿರುವ ಬೂತ್‌ ಕಮಿಟಿ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದೆ. ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ
ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next