Advertisement
ಭರ್ತಿಯಾದ ವಸತಿಗೃಹಶುಕ್ರವಾರದಿಂದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆ ಕ್ಷೇತ್ರದ ಕಡೆಗೆ ಆಗಮಿಸುತ್ತಿರುವ ಕಾರಣ ದೇಗುಲದ ಹಾಗೂ ಖಾಸಗಿ ವಸತಿಗೃಹಗಳು ಭರ್ತಿಯಾಗಿದ್ದವು. ಹಲವರಿಗೆ ತಂಗಲು ಕೊಠಡಿ ಸಮಸ್ಯೆ ಉಂಟಾಯಿತು. ಕೊಠಡಿ ಸಿಗದಿದ್ದಾಗ ಕೆಲವರು ಛತ್ರ, ಅಂಗಡಿ-ಹೊಟೇಲ್‌ಗಳಿಗೆ ತೆರಳಿ ವರಾಂಡದಲ್ಲಿ ಆಶ್ರಯ ಪಡೆದರು.
ಸರ್ಪಸಂಸ್ಕಾರ ಸೇವೆ, ಮಹಾ ಪೂಜೆ, ಶೇಷ ಸೇವೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಸಹಿತ ಹಲವು ಸೇವೆಗಳನ್ನು ನೆರವೇರಿಸಿದರು. ಎರಡು ದಿನಗಳು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ, ಹರಕೆ ಸೇವೆ ನೆರವೇರಿಸಿಕೊಂಡರು. ದೇಗುಲದ ಒಳಾಂಗಣ, ಹೊರಾಂಗಣ ಮತ್ತು ಆಸುಪಾಸಿನ ತುಂಬೆಲ್ಲ ಭಕ್ತ ಸಾಗರವೇ ನೆರೆದಿತ್ತು. ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು, ಗೃಹರಕ್ಷಕ ಮತ್ತು ಭದ್ರತಾ ಸಿಬಂದಿ ಕಷ್ಟ ಪಡುತ್ತಿದ್ದರು. ಕೆಲವೆಡೆ ನೂಕುನುಗ್ಗಲು ಉಂಟಾಗಿತ್ತು. ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್
ಕ್ಷೇತ್ರದಲ್ಲಿ ಭಕ್ತರ ಜತೆ ವಾಹನ ದಟ್ಟನೆಯೂ ಅಧಿಕವಿತ್ತು. ಹಲವು ಕಡೆಗಳಲ್ಲಿ ಪಾರ್ಕಿಂಗ್ ಜಾಗ ಕಾಯ್ದಿರಿಸಿದ್ದರೂ ವಾಹನಗಳನ್ನು ಸಿಕ್ಕ ಕಡೆಗಳಲ್ಲಿ ನಿಲ್ಲಿಸಿದ್ದರು. ಅಂಗಡಿ ಮುಂಗಟ್ಟುಗಳ ಮುಂದೆ ಭಕ್ತರು ವಾಹನ ನಿಲ್ಲಿಸಿದ್ದರಿಂದ ಸಮಸ್ಯೆಯಾಯಿತು. ಕುಮಾರಧಾರೆಯಿಂದ ರಥ ಬೀದಿ ತನಕವೂ ವಾಹನಗಳು ಸಾಲುಗಟ್ಟಿ ನಿಂತ ಕಾರಣ ಮುಖ್ಯ ರಸ್ತೆಯಲ್ಲೆ ಟ್ರಾಫಿಕ್ ಸಮಸ್ಯೆ ತಲೆದೋರಿತು.
Related Articles
ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಭಕ್ತ ಸಂದಣಿ ಅಧಿಕವಿತ್ತು. ರಸ್ತೆಗಳು ಭರ್ತಿಯಾಗಿದ್ದವು. ಮುಖ್ಯ ದೇಗುಲದಲ್ಲಿ ದೇವರ ದರ್ಶನಕ್ಕಾಗಿ ಗೋಪುರ ತನಕವೂ ಸರತಿ ಸಾಲು ಇತ್ತು. ಭೋಜನ ಪ್ರಸಾದ ಸ್ವೀಕರಿಸುವಲ್ಲೂ ಸರತಿ ಸಾಲು ಕಂಡು ಬಂತು.
Advertisement