ಕಿರುತೆರೆ ಈಗ ಚಿತ್ರೀಕರಣಕ್ಕೆ ಸಜ್ಜಾಗಿದೆ. ಮೇ.25ರಿಂದ ತಮ್ಮ ಧಾರಾವಾಹಿಗಳ ಚಿತ್ರೀಕರಿಸಲು ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ. ಚಿತ್ರೀಕರಣಕ್ಕೂ ಮುನ್ನ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೊಟ್ಟಿರುವ ಗೈಡ್‌ಲೈನ್ಸ್ ಕಾರ ಚಿತ್ರೀಕರಣ ನಡೆಸಲು ನಿರ್ಮಾಪಕರು ಒಪ್ಪಿದ್ದಾರೆ. ಈ ಕುರಿತು ಉದಯವಾಣಿ ಜೊತೆ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್, ಈಗಾಗಲೇ ಧಾರಾವಾಹಿ ನಿರ್ಮಾಪಕರು, ವಾಹಿನಿಯ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗಿದೆ.
ಚಿತ್ರೀಕರಣದಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಕುರಿತಂತೆ ಸುಧೀರ್ಘ ಚರ್ಚಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಸಲ ಕಿರುತೆರೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ವಿಮೆ ಮಾಡಿಸುವಂತಹ ಕೆಲಸವನ್ನು ಅಸೋಸಿಯೇಷನ್ ಮಾಡಿದೆ. ಇದಕ್ಕೆ ಎಲ್ಲಾ ನಿರ್ಮಾಪಕರ ಒಪ್ಪಿಗೆಯೂ ಇದೆ. ಕೋವಿಡ್-19 ಗ್ರೂಪ್ ಇನ್ಸೂರೆನ್ಸ್‌ಗೆ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಒಳಪಡುತ್ತಾರೆ. ಒಟ್ಟು 3 ಸಾವಿರ ಮಂದಿಗೆ ಇನ್ಸೂರೆನ್ಸ್ ಮಾಡಿಸುವ ಕುರಿತು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು, ಸರ್ಕಾರ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಹಿಂದೆ ಶೇ.33ರಷ್ಟು ಜನ ಮಾತ್ರ ಕೆಲಸ ಮಾಡಬೇಕು ಎಂಬುದಿತ್ತು. ಈಗ ಅದು ಶೇ.60 ರಷ್ಟು ಬಂದಿದೆ. ಸದ್ಯಕ್ಕೆ ಔಟ್ ಡೋರ್ ಶೂಟಿಂಗ್ ಇಲ್ಲ. ಒಳಾಂಗಣದಲ್ಲೇ ಚಿತ್ರೀಕರಣ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 5 ಅಥವಾ 6 ಗಂಟೆವರೆಗೆ ಚಿತ್ರೀಕರಣ ಮಾಡಬೇಕು. ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಅವಧಿ ವಿಸ್ತರಿಸಿಕೊಳ್ಳಬಹುದು. ಕೋವಿಡ್ – 19 ಗ್ರೂಪ್ ಇನ್ಸೂರೆನ್ಸ್ ಒಬ್ಬರಿಗೆ 2 ಲಕ್ಷದಿಂದ 3 ಲಕ್ಷದವರೆಗೂ ಪ್ಯಾಕೇಜ್ ಇರಲಿದೆ.
ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಏನಾದರೂ ಆದರೆ, ಸರ್ಕಾರ ನೋಡಿಕೊಳ್ಳುತ್ತಾ, ನಿರ್ಮಾಪಕರು ಬರುತ್ತಾರಾ, ಚಾನೆಲ್ ಇರುತ್ತಾ ಎಂಬ ಗೊಂದಲ ಬೇಡ. ಎಲ್ಲರೂ ನೆಮ್ಮದಿಯಿಂದ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ನಾವು ಎಲ್ಲರಿಗೂ ಗ್ರೂಪ್ ಇನ್ಸೂರೆನ್ಸ್ ಮಾಡಿಸುವ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಮೂರ್‍ನಾಲ್ಕು ಇನ್ಸೂರೆನ್ಸ್ ಕಂಪೆನಿಗಳ ಜೊತೆ ಮಾತನಾಡಿದ್ದೇವೆ. ಅಂತಿಮವಾಗಿ ಯಾವುದಾದರೊಂದು ವಿಮೆ ಕಂಪೆನಿ ಜೊತೆ ವಿಮೆ ಮಾಡಿಸುವ ಕೆಲಸ ಶುರು ಮಾಡ್ತೀವಿ. ನಮ್ಮ ಅಸೋಸಿಯೇಷನ್ ಕೊಟ್ಟ ಸೂಚನೆಗಳ ಪ್ರಕಾರ ಶೂಟಿಂಗ್ ನಡೆಸಬೇಕು ಎನ್ನುತ್ತಾರೆ ಅವರು.
ಚಿತ್ರೀಕರಣ ಸಮಯದಲ್ಲಿ ಸ್ಯಾನಿಟೈಸರ್ ಬಳಸಬೇಕು. ಕಲಾವಿದರನ್ನು ಹೊರತುಪಡಿಸಿ ಎಲ್ಲರೂ ಮಾಸ್ಕ್,ಗ್ಲೋಸ್ ಧರಿಸಬೇಕು. ಮೇಕಪ್ ಮೆಟೀರಿಯಲ್ ಅವರೇ ತರಬೇಕು, ಮೇಕಪ್ ಮ್ಯಾನ್ ಇದ್ದರೂ ಸ್ಯಾನಿ ಟೈಸರ್ ಜೊತೆ ಫ್ರೆಶ್ ಆಗಿ ಮೇಕಪ್ ಮಾಡಬೇಕು. ಒಟ್ಟಾರೆ ಎರಡು ತಿಂಗಳು ಹೇಗೆ ಹೊಂದಿಕೊಂಡಿ ದ್ದೆವೋ, ಹಾಗೆ ಜೀವನ ಶೈಲಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎನ್ನುತ್ತಾರೆ ಶಿವಕುಮಾರ್.