Advertisement
ಸಚಿವ ಸ್ಥಾನದ ಆಕಾಂಕ್ಷಿಯಾದ ಹಿರಿಯ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸಹಿತ ಹತ್ತಾರು ಶಾಸಕರು ಗುರುವಾರ ಭೋಜನ ಕೂಟದ ಹೆಸರಿನಲ್ಲಿ ಸಭೆ ಸೇರಿ ಒಂದಿಷ್ಟು ಅತೃಪ್ತಿ ಹೊರಹಾಕಿದ್ದಾರೆ. ಅವರ ಒತ್ತಾಯ ಸ್ಥಾನಮಾನಕ್ಕೆ ಎಂಬಂತೆ ಕಂಡರೂ ಕ್ರಮೇಣ ನಾಯಕತ್ವ ಬದಲಾವಣೆಗಾಗಿ ಒತ್ತಡ ಹೇರುವ ಸ್ವರೂಪ ಪಡೆಯುವುದೇ ಎಂಬ ಆತಂಕವೂ ಪಕ್ಷದಲ್ಲಿ ಮನೆ ಮಾಡಿದೆ.ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮತ್ತು ವಿಧಾನ ಪರಿಷತ್‌ನ ಆಯ್ದ ಸ್ಥಾನಕ್ಕೆ ಚುನಾವಣೆ ಸಮೀ ಪಿಸುತ್ತಿರುವ ಹೊತ್ತಿನಲ್ಲೇ ಅತೃಪ್ತ ಶಾಸಕರು ಸ್ಥಾನಮಾನಕ್ಕಾಗಿ ಒತ್ತಡ ತಂತ್ರ ಆರಂಭಿಸಿದಂತೆ ಕಾಣುತ್ತಿದೆ.
Related Articles
Advertisement
ರಾಜ್ಯ ಸಭೆ ಮೇಲೆ ಕಣ್ಣುಗುರುವಾರ ಉತ್ತರ ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ ನಡೆಸಿರುವ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಉಮೇಶ್ ಕತ್ತಿ, ಕೋವಿಡ್ 19 ನಿಯಂತ್ರಣ ಕಾರ್ಯದ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಭೇಟಿಯಾಗಲು ಸಾಧ್ಯವಾಗದ ಕಾರಣ ಶಾಸಕರೆಲ್ಲ ಜತೆ ಸೇರಿ ಊಟ ಮಾಡಿದ್ದೇವೆ. ಸಹೋದರ ರಮೇಶ್ ಕತ್ತಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ನೀಡಿದ್ದ ಭರವಸೆ ಬಗ್ಗೆ ಸಿಎಂಗೆ ನೇರವಾಗಿಯೇ ನೆನಪಿಸಲಾಗಿದೆ. ಬಂಡಾಯ ಚಟುವಟಿಕೆ ನಡೆಸಿಲ್ಲ ಎಂದಿದ್ದಾರೆ. ಯತ್ನಾಳ್ ನೇರ ಅಸಮಾಧಾನ
ಯಡಿಯೂರಪ್ಪ ಅವರು ಸಿಎಂ ಆಗಿರುವ ವರೆಗೆ ನಾನು ಸಚಿವನಾಗುವುದಿಲ್ಲ ಎಂಬುದು ನನಗೆ ಗೊತ್ತಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಮ್ಮ ನಾಯಕರು. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಬಿಎಸ್‌ವೈ ನಾಯಕತ್ವದ ವಿರುದ್ಧ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೇರ ಅಸಮಾಧಾನ ಹೊರ ಹಾಕಿದ್ದಾರೆ. ಕತ್ತಿಗೆ ಸಚಿವ ಸ್ಥಾನ ಕೊಡಿ
ಬಿಜೆಪಿ ಸರಕಾರ ರಚನೆಯಾಗಿ ವರ್ಷ ಸಮೀಪಿಸುತ್ತಿದ್ದರೂ ಹಿರಿಯರಾದ ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡದಿರುವುದು ಸರಿಯಲ್ಲ. ಅವರಿಗೆ ಸಚಿವ ಸ್ಥಾನ ನೀಡುವ ಜತೆಗೆ ಅವರ ಸಹೋದರನನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಗುರುವಾರ ನಡೆದ ಅತೃಪ್ತರ ಸಭೆಯಲ್ಲಿ ಪಾಲ್ಗೊಳ್ಳದಿದ್ದರೂ ಆ ಗುಂಪಿನಲ್ಲೇ ಗುರುತಿಸಿಕೊಂಡಂತಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಆ ಮೂಲಕ ತಮ್ಮ ಹಕ್ಕೊತ್ತಾಯ ಸ್ಥಾನಮಾನಕ್ಕಾಗಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಾರದಲ್ಲೇ ಎರಡು ಬಾರಿ ಅತೃಪ್ತ ಶಾಸಕರು ಸಭೆ ಸೇರಿ ಚರ್ಚಿಸಿರುವುದು, ಮೊದಲ ಸಭೆಗಿಂತ ಎರಡನೇ ಸಭೆಗೆ ಹಾಜರಾದವರ ಸಂಖ್ಯೆ ಹೆಚ್ಚಾಗಿರುವುದು, ಅತೃಪ್ತರ ಪೈಕಿ ಲಿಂಗಾಯತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಪಕ್ಷದೊಳಗೆ ತಲ್ಲಣ ಹೆಚ್ಚಿಸಿದೆ. ಇದು ಮುಂದುವರಿದು ಬಂಡಾಯದ ಸ್ವರೂಪ ಪಡೆಯಲಿದೆಯೇ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಬಂಡಾಯದ ಪ್ರಶ್ನೆ ಇಲ್ಲ
ಉತ್ತರ ಕರ್ನಾಟಕ ಭಾಗದ ಶಾಸಕರೆಲ್ಲ ಊಟಕ್ಕೆ ಸೇರಿ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿದೆವು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗಿತ್ತು. ಆದರೆ ನಾಯಕತ್ವದ ಬಗ್ಗೆ ಮಾತನಾಡಿಲ್ಲ ಮತ್ತು ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಸಮಜಾಯಿಷಿ ನೀಡುವ ಕಸರತ್ತು ನಡೆಸಿದರು. ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ವಾರದ ಹಿಂದೆಯೇ ಇದೇ ರೀತಿ ಶಾಸಕರೆಲ್ಲ ಸೇರಿ ಊಟ ಮಾಡಿದ್ದೆವು. ಇತ್ತೀಚೆಗೆ ಸಿಎಂ ಅವರನ್ನು ಭೇಟಿಯಾಗಿದ್ದಾಗ ಅವರೇ ಈ ವಿಚಾರ ಪ್ರಸ್ತಾಪಿಸಿ ನಾನು ಬರಬಹುದೇ ಎಂದು ಪ್ರಶ್ನಿಸಿದ್ದರು. ಅಗತ್ಯವಾಗಿ ಬರುವಂತೆ ಆಹ್ವಾನ ನೀಡಿದ್ದೆ. ಅಲ್ಲದೇ ಸಹೋದರನನ್ನು ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ಹಿಂದೆ ನೀಡಿದ್ದ ಮಾತಿನ ಬಗ್ಗೆಯೂ ಅವರ ಬಳಿ ಪ್ರಸ್ತಾಪಿಸಿದ್ದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸಬೇಕಿದೆ ಎಂಬುದು ಗೊತ್ತಿದೆ ಎಂದು ತಿಳಿಸಿದ್ದಾರೆ. ಯಡಿಯೂರಪ್ಪ ಅಸಮಾಧಾನ
ಅತೃಪ್ತರ ಸರಣಿ ಸಭೆ ಬೆನ್ನಲ್ಲೇ ಸಿಎಂ ಬಿಎಸ್‌ವೈ ಮಾಜಿ ಸಚಿವ ಉಮೇಶ್ ಕತ್ತಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಉಮೇಶ್ ಕತ್ತಿ “ಬಂಡಾಯವಿಲ್ಲ’ ಎಂಬುದಾಗಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು ಎನ್ನಲಾಗಿದೆ. ಚಿಕ್ಕೋಡಿ ಕ್ಷೇತ್ರ ದಿಂದ ರಮೇಶ್ ಕತ್ತಿಗೆ ಟಿಕೆಟ್ ನೀಡಲು ಶಿಫಾರಸು ಮಾಡಲಾಗಿತ್ತು. ಆಗ ಬಿಟ್ಟು ಕೊಟ್ಟು ಈಗ ರಾಜ್ಯಸಭೆಗೆ ನೇಮಿಸಿ ಎಂದರೆ ಏನರ್ಥ? ನಾನು ಸಚಿವ ಸ್ಥಾನ ನೀಡಲು ಸಿದ್ಧನಿದ್ದೇನೆ. ಆದರೆ ಪರಿಸ್ಥಿತಿ ಅರ್ಥೈಸಿಕೊಂಡು ವ್ಯವಹರಿಸಬೇಕು. ಕೋವಿಡ್ 19 ತಡೆಗಾಗಿ ಶ್ರಮಿಸುತ್ತಿರುವ ಹೊತ್ತಿನಲ್ಲೇ ಇಂಥ ಚಟುವಟಿಕೆ ನಡೆಸಿ ಸರಕಾರದ ವರ್ಚಸ್ಸಿಗೆ ಧಕ್ಕೆ ತರುವುದು ಸರಿಯೇ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು ಎನ್ನಲಾಗಿದೆ. ಈಗ ಬೇಡವಿತ್ತು
ಸ್ಥಾನಮಾನ ಕೇಳುವುದು ತಪ್ಪಲ್ಲವಾದರೂ ಯಾವ ಸಂದರ್ಭ ದಲ್ಲಿ ಹಕ್ಕೊತ್ತಾಯ ಮಂಡಿಸಬೇಕು ಎಂಬುದು ಮುಖ್ಯ. ಕೊರೊನಾ ಕಾಟದ ಈ ಹೊತ್ತಿನಲ್ಲಿ ಸ್ಥಾನಮಾನ ಕ್ಕಾಗಿ ಕೂಗು ಸೂಕ್ತವಲ್ಲ. ಇಂತಹ ಬೆಳವಣಿಗೆ ಗಳಿಂದ ಪಕ್ಷದ ವರ್ಚಸ್ಸು ಕುಗ್ಗುವ ಜತೆಗೆ ಸೋಂಕು ನಿಯಂತ್ರಣಕ್ಕೆ ಮಾಡಿದ ಪ್ರಯತ್ನ ನೀರಿನಲ್ಲಿ ಹೋಮ ವಾಗಬಹುದು. ಇಂತಹ ವಿಚಾರಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಕೆಲವು ಶಾಸಕರು ಅಭಿಪ್ರಾಯಪಟ್ಟಿದ್ದಾರೆ. ಅತೃಪ್ತಿಗೆ ಏನು ಕಾರಣ?
1. ಕೆಲ ಸಗಳಾಗುತ್ತಿಲ್ಲ
-ಸರಕಾರ ರಚನೆಯಾಗಿ ವರ್ಷ ಸಮೀಪಿಸುತ್ತಿದ್ದರೂ ಪಕ್ಷದ ಶಾಸಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.
-ಸಿಎಂ, ಸಚಿವರು ಆದೇಶಿಸಿದರೂ ಕೆಲಸಗಳಾಗುತ್ತಿಲ್ಲ. ಅನುದಾನ ಬಿಡುಗಡೆಯಾಗುತ್ತಿಲ್ಲ.
-ಹೀಗಾಗಿ ಮತದಾರರಿಗೆ ಉತ್ತರಿಸುವುದು ಕಷ್ಟವಾಗಿದೆ. 2. ರಾಜ್ಯ ಸಭೆ ತಂತ್ರ
-ಸದ್ಯದಲ್ಲೇ ರಾಜ್ಯಸಭೆ ಮತ್ತು ವಿಧಾನ ಪರಿಷತ್‌ನ ಆಯ್ದ ಸ್ಥಾನಗಳಿಗೆ ಚುನಾವಣೆ ಇದೆ.
-ಸ್ಥಾನಮಾನಕ್ಕಾಗಿ ಗಮನ ಸೆಳೆಯಲು, ಒತ್ತಡ ಹೇರಲು ಈ ತಂತ್ರಗಾರಿಕೆ. 3. ಸಚಿವರು ಸಿಗುತ್ತಿಲ್ಲ
-ಕೆಲವು ಸಚಿವರು ಪಕ್ಷದ ಶಾಸಕರ ಕೈಗೆ ಸಿಗುತ್ತಿಲ್ಲ.
-ಶಾಸಕರ ಮನವಿ, ಅಹವಾಲು ಆಲಿಸುತ್ತಿಲ್ಲ. 4. ಕಡೆಗಣನೆ
-ವಲಸಿಗರಿಗೆ ಪ್ರಭಾವೀ ಖಾತೆ ನೀಡಿ ಪಕ್ಷ ನಿಷ್ಠರ ಕಡೆಗಣನೆ ಸರಿ ಯಲ್ಲ.
-ಸ್ಥಾನಮಾನ ಹಂಚಿಕೆ ವೇಳೆ ತಮ್ಮನ್ನೂ ಪರಿಗಣಿಸಬೇಕು ಎಂಬ ಒತ್ತಡ ತಂತ್ರ 5. ಸ್ಥಾನಮಾನ
-ರಮೇಶ್ ಕತ್ತಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು. ಇಲ್ಲವೇ ತನಗೆ ಸಚಿವ ಸ್ಥಾನ ನೀಡಬೇಕು ಎಂಬ ಉಮೇಶ್ ಕತ್ತಿಯ ವರ ಅಜೆಂಡಾ.