ಉಡುಪಿ: ಮಣಿಪಾಲದಲ್ಲಿ ನಿನ್ನೆ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂರು ಕಾರು ಹಾಗೂ ಒಂದು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರುಗಳಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಶನಿವಾರ ತಡರಾತ್ರಿ ಸಮಯಕ್ಕೆ ಮಣಿಪಾಲ ಡಿಸಿ ಆಫೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ ಒಂದು ಇನ್ನೋವಾ, ಒಂದು ಹುಂಡೈ ವೆರ್ನಾ, ಒಂದು ಎಕ್ಸ್ಯು ವಿ ಕಾರು ಮತ್ತು ಒಂದು ಮೋಟಾರ್ ಬೈಕ್ ನಜ್ಜುಗುಜ್ಜಾಗಿದೆ.
ಮೂಲಗಳ ಪ್ರಕಾರ ಇನ್ನೋವಾ ಕಾರು ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಡಿಸಿ ಆಫೀಸ್ ಕಡೆಗೆ ಸಂಚರಿಸುತಿತ್ತು ಮಣಿಪಾಲದ ಪೋಲಾರ್ ಬೇರ್ ಬಳಿ ಇರುವ ಡಿವೈಡರ್ ನಲ್ಲಿ ಓರ್ವ ಬುಲೆಟ್ ಬೈಕ್ ಸವಾರ ಒಮ್ಮೆಲೇ ಯೂ ಟರ್ನ್ ತೆಗೆದುಕೊಳ್ಳುವಾಗ ಬೈಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಇನ್ನೋವಾ ಕಾರು ರಸ್ತೆ ಬದಿಯಲ್ಲಿರುವ ಮನೆಯ ಎದುರಿನ ಚರಂಡಿಗೆ ಉರುಳಿ ಬಿದ್ದಿದೆ. ಈ ಅಪಘಾತದ ಬಗ್ಗೆ ಮಾಹಿತಿ ಪಡೆದ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರ ಸಹಪಾಠಿಗಳು ಮತ್ತೊಂದು ಎಕ್ಸ ಯು ವಿ ಕಾರು ಮತ್ತು ಬೈಕ್ ನಲ್ಲಿ ಸ್ಥಳಕ್ಕೆ ಆಗಮಿಸಿ ತಮ್ಮ ಕಾರು ಹಾಗೂ ಬೈಕ್ ಅನ್ನು ರಸ್ತೆ ಪಕ್ಕ ನಿಲ್ಲಿಸಿದ್ದರು. ಇದೇ ಸಂಧರ್ಭದಲ್ಲಿ ಅತಿವೇಗದಿಂದ ಆಗಮಿಸಿದ ಹುಂಡೈ ವೆರ್ನಾ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ತಡೆಗೋಡೆಗೆ ಹೊಡೆದು, ರಸ್ತೆ ಪಕ್ಕ ನಿಲ್ಲಿಸಿದ್ದ ಎಕ್ಸ್ ಯು ವಿ ಕಾರು ಮತ್ತು ಬೈಕ್ ನ ಮೇಲೇರಿ ನಿಂತಿದೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಕಾರ್ಯಪ್ರವರ್ತರಾಗಿ ತಕ್ಷಣವೇ ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗಿನ ವರೆಗೂ ಎಲ್ಲಾ ವಾಹನಗಳು ರಸ್ತೆ ಬದಿಯಲ್ಲಿಯೇ ಇದ್ದು ಅಪಾರ ಸಂಖ್ಯೆಯ ಸಾರ್ವಜನಿಕರು ವೀಕ್ಷಣೆ ಮಾಡುತಿದ್ದಾರೆ. ಘಟನೆಯಿಂದಾಗಿ ರಸ್ತೆ ಬದಿಯಲ್ಲಿರುವ ಮೂರು ಮನೆಗಳ ತಡೆಗೋಡೆಗಳಿಗೆ ಕೂಡಾ ಹಾನಿಯಾಗಿದೆ.