ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಶನಿವಾರ ರಾತ್ರಿ ಹಾಳಾಗಿ ನಿಂತಿದ್ದ ಕಾರನ್ನು ಟೋಯಿಂಗ್(ಕೆಟ್ಟು ನಿಂತಿದ್ದ ಕಾರನ್ನು ತೆರವುಗೊಳಿ ಸುವಾಗ) ಮಾಡುತ್ತಿದ್ದ ವೇಳೆ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೌಕರ ದುರ್ಮರಣ ಹೊಂದಿದ್ದಾರೆ.
ಗೊಲ್ಲಹಳ್ಳಿಯ ನಿವಾಸಿ ಮಂಜುನಾಥ್ (52) ಮೃತಪ ಟ್ಟವರು. ಮಂಜುನಾಥ್ ಸಹ ಪಾಠಿ ರಾಜಣ್ಣ ಹಾಗೂ ಗೂಡ್ಸ್ ವಾಹನ ಚಾಲಕ ಸಂದೀಪ್ ಗಾಯಗೊಂಡವರು.
ಆ.10ರಂದು ಮಂಜುನಾಥ್ ಮಗಳ ಮದುವೆ ನಿಗದಿಯಾಗಿತ್ತು. ಬೆಳಗ್ಗೆ ಲಗ್ನ ಪತ್ರಿಕೆ ಹಂಚಿ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹಾಜರಾಗಿದ್ದ ಮಂಜುನಾಥ್ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ಪ್ರಕರಣದ ವಿವರ: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಶನಿವಾರ ರಾತ್ರಿ ಸುಮಾರು 11.15ಕ್ಕೆ ಐ10 ಕಾರೊಂದು ಕೆಟ್ಟು ನಿಂತಿತ್ತು. ಅದನ್ನು ಟೋಯಿಂಗ್ ಮಾಡಿಕೊಳ್ಳಲು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಮಂಜುನಾಥ್, ರಾಜಣ್ಣ, ಸತೀಶ್ ತೆರಳಿದ್ದರು. ಸಿಬ್ಬಂದಿ ಸತೀಶ್ ಹಾಗೂ ರಾಜಣ್ಣ ಕಾರನ್ನು ಟೋಯಿಂಗ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮಂಜುನಾಥ್ ಮೊಬೈಲ್‌ನಲ್ಲಿ ಈ ಕಾರಿನ ಫೋಟೋ ತೆಗೆಯುತ್ತಿದ್ದರು. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಬೊಲೆರೋ ಪಿಕಪ್ ಗೂಡ್ಸ್ ವಾಹನವು ನಿಯಂತ್ರಣ ತಪ್ಪಿ ಐ-10 ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಲ್ಲೇ ಇದ್ದ ರಾಜಣ್ಣ ಹಾಗೂ ಮಂಜುನಾಥ್‌ಗೂ ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರೂ ಗಂಭೀರ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೊಲೆರೋ ಬರುತ್ತಿದ್ದಂತೆ ಸಿಬ್ಬಂದಿ ಸತೀಶ್ ಪಕ್ಕಕ್ಕೆ ಹಾರಿದ್ದರಿಂದ ಅವರಿಗೆ ಗಾಯಗಳಾಗಿಲ್ಲ. ಗಾಯಾಳುಗಳನ್ನು ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮಂಜುನಾಥ್ ಮೃತಪಟ್ಟಿದ್ದಾರೆ. ಇನ್ನು ರಾಜಣ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸರಣಿ ಅಪಘಾತ ಸಂಭವಿಸಿದ್ದು, ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ 2 ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಇಟಿಪಿಎಲ್ ಮುಂದೆ ಶವವಿಟ್ಟು ಧರಣಿ: ಅಪಘಾತ ದಲ್ಲಿ ಸಾವನ್ನಪ್ಪಿದ ಮಂಜುನಾಥ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಶವವನ್ನು ಬಿಇಟಿ ಪಿಎಲ್ (ಬೆಂಗಳೂರು ಎಲಿವೆಟೆಡ್ ಟೋಲ್ ಲಿ.) ಮುಂದಿಟ್ಟು ಅವರ ಸಂಬಂಧಿಕರು, ಆಪ್ತರು ಪ್ರತಿಭಟನೆ ನಡೆಸಿದ್ದಾರೆ. ಮೃತ ಮಂಜುನಾಥ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಾವಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಕುಡಿದು ವಾಹನ ಚಾಲನೆ ಶಂಕೆ: ಬೊಲೆರೋ ಪಿಕಪ್ ಗೂಡ್ಸ್ ವಾಹನ ಚಾಲಕ ಸಂದೀಪ್ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬೊಮ್ಮನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಂಪನಿ ಯೊಂದು ಏರ್‌ಪೋರ್ಟ್‌ಗೆ ಕೊರಿಯರ್ ಸರ್ವೀಸ್ ಮಾಡುತ್ತದೆ. ಈ ಕಂಪನಿಯಿಂದ ಕೆಲ ವಸ್ತುಗಳನ್ನು ಸಂಗ್ರಹಿಸಿ ಗೂಡ್ಸ್ ವಾಹನದಲ್ಲಿ ತುಂಬಿ ಏರ್‌ಪೋರ್ಟ್‌ಗೆ ಸಂದೀಪ್ ತೆರಳುತ್ತಿದ್ದ. ಮೇಲ್ಸೇತುವೆಯಲ್ಲಿ ಕಾರು ಕೆಟ್ಟು ನಿಂತಿದ್ದ ಹಿನ್ನೆಲೆಯಲ್ಲಿ ಎಲ್ಲ ವಾಹನಗಳೂ ಮೇಲ್ಸೇ ತುವೆಯ ಎಡ ಬದಿಯಲ್ಲಿ ಹೋಗುತ್ತಿದ್ದವು. ಬಲ ಬದಿಯಲ್ಲಿ ರಸ್ತೆ ಖಾಲಿ ಇರುವುದನ್ನು ಗಮನಿಸಿದ ಸಂದೀಪ್ ವೇಗವಾಗಿ ಬಂದು ಕೆಟ್ಟು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಸಂದೀಪ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ಯ ತಲೆಗೆ ಗಾಯವಾಗಿ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಪಡೆದ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆಯನ್ನು ಹಂಚಿ ಕೆಲಸಕ್ಕೆ ಬಂದಿದ್ದ ತಂದೆ ದುರ್ಮರಣ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಮಂಜುನಾಥ್ ಅವರ ಮಗಳ ಮದುವೆ ಆ.10ರಂದು ನಿಗದಿಯಾಗಿತ್ತು. ಮಗಳ ಮದುವೆಗೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದ ಮಂಜುನಾಥ್, ಶನಿವಾರ ಬೆಳಗ್ಗೆ ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದರು. ರಾತ್ರಿ ಪಾಳಿ ಕೆಲಸಕ್ಕೆ ಹಾಜರಾದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.