ಮೆಲ್ಬರ್ನ್: ಸೆರೆನಾ ವಿಲಿಯಮ್ಸ್ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್‌ನಿಂದ ಹಿಂದೆ ಸರಿದಿದ್ದಾರೆ. ಕೂಟದ ಎಂಟ್ರಿ ಲಿಸ್ಟ್‌ನಲ್ಲಿ ಅಮೆರಿಕನ್ ಆಟಗಾರ್ತಿಯ ಹೆಸರು ಕಾಣಿಸಿಕೊಂಡಿಲ್ಲ.
ವೈದ್ಯರ ಸಲಹೆ ಮೇರೆಗೆ ಸೆರೆನಾ ವಿಲಿಯಮ್ಸ್ 2022ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಆಸ್ಟ್ರೇಲಿಯನ್ ಓಪನ್ ವೆಬ್‌ಸೈಟ್ ಬುಧವಾರ ಪ್ರಕಟಿಸಿದೆ.
ಇದು ಸುಲಭದ ನಿರ್ಧಾರವಲ್ಲ. ಸ್ಪರ್ಧೆಗೆ ಇಳಿಯಬೇಕಾದರೆ ದೈಹಿಕವಾಗಿ ಸಮರ್ಥವಾಗಿರುವುದು ಮುಖ್ಯ. ಮೆಲ್ಬರ್ನ್ ನನ್ನ ನೆಚ್ಚಿನ ತಾಣಗಳಲ್ಲೊಂದು. ಇಲ್ಲಿನ ಅಭಿಮಾನಿಗಳ ಸಂಭ್ರಮವನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಸೆರೆನಾ ವಿಲಿಯಮ್ಸ್ ಪ್ರತಿಕ್ರಿಯೆ.
ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ
40 ವರ್ಷದ ಸೆರೆನಾ ವಿಲಿಯಮ್ಸ್ ಕಳೆದ ವಿಂಬಲ್ಡನ್ ಮೊದಲ ಸುತ್ತಿನ ಪಂದ್ಯದ ವೇಳೆ ಗಾಯಾಳಾಗಿ ಹಿಂದೆ ಸರಿದ ಬಳಿಕ ಯಾವುದೇ ಸ್ಪರ್ಧಾತ್ಮಕ ಕೂಟಗಳಲ್ಲಿ ಕಾಣಿಸಿಕೊಂಡಿಲ್ಲ. ಇದರಿಂದ ಅವರ ರ್‍ಯಾಂಕಿಂಗ್ 41ಕ್ಕೆ ಕುಸಿದಿತ್ತು.
ತಮ್ಮ ಕೊನೆಯ ಹಾಗೂ 23ನೇ ಗ್ರ್ಯಾನ್‌ಸ್ಲಾಮ್ ಟೆನಿಸ್ ಪ್ರಶಸ್ತಿಯನ್ನು ಸೆರೆನಾ ಆಸ್ಟ್ರೇಲಿಯನ್ ಓಪನ್‌ನಲ್ಲೇ ಜಯಿಸಿದ್ದರು. ಅದು 2017ರ ಕೂಟವಾಗಿತ್ತು. ಈ ವರ್ಷದ ಮೆಲ್ಬರ್ನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನವೋಮಿ ಒಸಾಕಾಗೆ ಶರಣಾಗಿದ್ದರು.