Advertisement

ಸೆ.3ರಂದು ಧರ್ಮ ಸಂಸದ್‌

07:45 AM Jul 17, 2018 | |

ಬೆಂಗಳೂರು: ಧರ್ಮಸ್ಥಳದ ಕನ್ಯಾಡಿ ಬಳಿ ಇರುವ ಶ್ರೀರಾಮ ಕ್ಷೇತ್ರ ಸಂಸ್ಥಾನದಲ್ಲಿ ಸೆ.3 ರಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ “ಪಟ್ಟಾಭಿಷೇಕ ದಶಮಾನೋತ್ಸವ’ ಮತ್ತು “ಧರ್ಮ ಸಂಸದ್‌’ ನಡೆಯಲಿದೆ.

Advertisement

ಸೋಮವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಕ್ಷೇತ್ರದ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಜಗತ್‌ ಕಲ್ಯಾಣ ಮತ್ತು ಧರ್ಮಘೋಷಣೆಗಾಗಿ “ಧರ್ಮ ಸಂಸದ್‌’ ಹಮ್ಮಿಕೊಳ್ಳಲಾಗಿದೆ. ಸನಾತನ ಹಿಂದೂ ಧರ್ಮದ ಮೌಲ್ಯಗಳು ನಮ್ಮ ಆಸ್ತಿಯಾಗಿವೆ‌ ಎಂದು ಹೇಳಿದರು. 

ಧರ್ಮ ಸಂಸದ್‌ನಲ್ಲಿ ಪಾಲ್ಗೊಳ್ಳಲು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್‌ ಹಿಂದೂ ಧರ್ಮ ರಕ್ಷಣೆ ಸಂಬಂಧ, ಬೇರೆ -ಬೇರೆ ಪರಂಪರೆಯ ಆಚಾರ್ಯರನ್ನು ಮತ್ತು ಮಹಾಮಂಡಲೇಶ್ವರರನ್ನು ಒಟ್ಟುಗೂಡಿಸಿ “ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್‌’ ಸ್ಥಾಪಿಸುವ ಗುರಿ ಹೊಂದಲಾಗಿದೆ.
ರಾಜಕೀಯ ರಹಿತ ಮಂಚ್‌ ಇದಾಗಿರಲಿದ್ದು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ನಾಗಾ ಸಾಧುಗಳು, ಸೀತಾರಾಮ ಪರಂಪರೆ, ತ್ಯಾಗಿ, ಬೈರಾಗಿ ಸೇರಿದಂತೆ ವಿವಿಧ ಪರಂಪರೆಯ ಮಹಾಮಂಡಲೇಶ್ವರರನ್ನು ಒಂದೇ ವೇದಿಕೆಗೆ ತರಲಾಗುವುದು ಎಂದು ಹೇಳಿದರು.

ಹಿಂದಿನ ಕಾಲದಲ್ಲಿ  ಸಪ್ತರ್ಷಿಗಳು ಧರ್ಮ ಸಂಸದ್‌ನಲ್ಲಿ ನಿರ್ಣಯಿಸಿ ದೇಶಕ್ಕೆ‌ ಸುಭಿಕ್ಷೆ ನೀಡಿದ ಮಾದರಿಯಲ್ಲೆ ಧರ್ಮ ಹಾಗೂ ಜನರಿಗೆ ತೊಂದರೆ ಉಂಟಾದಾಗ  ರಾಷ್ಟ್ರೀಯ ಕಲ್ಯಾಣ ಮಂಚ್‌ನಲ್ಲಿ ಸಂತರು ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಿದ್ದಾರೆ. ಮಂಚ್‌ ತೆಗೆದುಕೊಂಡ ನಿರ್ಧಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಸರ್ಕಾರದ ಆತ್ಮಸ್ಥೈರ್ಯ ಹೆಚ್ಚಿಸುವುದು ಕೂಡ ಇದರ ಸದುದ್ದೇಶವಾಗಿದೆ ಎಂದರು.

Advertisement

ದೇಶದಲ್ಲೀಗ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಸಂಬಂಧ ಧರ್ಮ ಸಂಸದ್‌ನಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.

2ಸಾವಿರಕ್ಕೂ ಅಧಿಕ ಸಾಧುಗಳು:
ಧರ್ಮ ಸಂಸದ್‌ನಲ್ಲಿ ಬದರಿ, ಕೇದಾರ, ಗಂಗೋತ್ರಿ, ನೇಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ನಾಸಿಕ್‌, ಅಲಹಾಬಾದ್‌, ರಾಮೇಶ್ವರ, ಅಸ್ಸಾಂ, ಕೇರಳ ಮತ್ತು ತಮಿಳುನಾಡು ಸೇರಿದಂತೆ ದೇಶದ ಹಲವು ಕಡೆಗಳಿಂದ ಸುಮಾರು 2 ಸಾವಿರಕ್ಕೂ ಅಧಿಕ ಸಾಧು -ಸಂತರರು ಭಾಗವಹಿಸಲ್ಲಿದ್ದಾರೆ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ವೇದಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next