ಹೊಸದಿಲ್ಲಿ: ಕೊರೊನಾದಿಂದಾಗಿ ಸ್ಥಗಿತಗೊಂಡಿರುವ 2021ರ ಐಪಿಎಲ್ ಪಂದ್ಯಾವಳಿ ಎಲ್ಲಿ, ಯಾವಾಗ ಮುಂದುವರಿಯಲಿದೆ ಎಂಬ ಬಗ್ಗೆ ಆಗಾಗ ಕೌತುಕದ ಸುದ್ದಿಗಳು ಬಿತ್ತರಗೊಳ್ಳುತ್ತಲೇ ಇವೆ. ಒಮ್ಮೆ ಇಂಗ್ಲೆಂಡ್‌ನಲ್ಲಿ ಈ ಕೂಟ ನಡೆಯಲಿದೆ ಎಂದು ವರದಿಯಾಯಿತು. ಇನ್ನೊಮ್ಮೆ ಯುಎಇಯೇ ಇದಕ್ಕೆ ಸೂಕ್ತ ತಾಣ ಎಂಬ ಅಭಿಪ್ರಾಯ ಕೇಳಿಬಂತು.
ರವಿವಾರದ ಬ್ರೇಕಿಂಗ್ ನ್ಯೂಸ್ ಪ್ರಕಾರ ಐಪಿಎಲ್ ದ್ವಿತೀಯ ಹಂತದ ಸಂಭಾವ್ಯ ದಿನಾಂಕವೂ ಪ್ರಕಟಗೊಂಡಿದೆ. ಈ ಕ್ಯಾಶ್ ರಿಚ್ ಸರಣಿ ಸೆ. 15-ಅ. 15ರ ನಡುವೆ ನಡೆಯಲಿದೆ ಎಂದು ಬಿಸಿಸಿಐ ಮೂಲ ಹೇಳಿದ್ದಾಗಿ ವರದಿಯಾಗಿದೆ. ತಾಣ, ಯುಎಇ.
ಮೇ 29ರ ಬಿಸಿಸಿಐ ವಿಶೇಷ ಸಭೆಯಲ್ಲಿ ಐಪಿಎಲ್-14ರ ಉಳಿದ ಪಂದ್ಯಗಳ ತಾಣ ಹಾಗೂ ದಿನಾಂಕ ಅಂತಿಮಗೊಳ್ಳುವ ಎಲ್ಲ ಸಾಧ್ಯತೆ ಇದೆ.
ಈ ಕೂಟವನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಿವುದು ಬಿಸಿಸಿಐ ಯೋಜನೆಯಾಗಿತ್ತು. ಆದರೆ ಈಗ ಯುಎಇಯೇ ಸೂಕ್ತ ಎಂಬ ಲೆಕ್ಕಾಚಾರದಲ್ಲಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ. 13ನೇ ಐಪಿಎಲ್ ಪಂದ್ಯಾವಳಿಯನ್ನು ಅರಬ್ ನಾಡಿನಲ್ಲಿ ಯಶಸ್ವಿಯಾಗಿ ಸಂಘಟಿಸಿದ ನಿದರ್ಶನ ಹಸಿರಾಗಿದೆ. ಅಲ್ಲದೇ ಇಲ್ಲಿನ ಬಯೋಬಬಲ್ ಏರಿಯಾ ಕೂಡ ಅತ್ಯಂತ ಸುರಕ್ಷಿತ ಎಂಬುದು ಕೂಡ ಖಾತ್ರಿಯಾಗಿದೆ.
ಟೆಸ್ಟ್ ನಡುವಿನ ಅಂತರ ಕಡಿಮೆ
ಸೆ. 14ಕ್ಕೆ ಭಾರತದ ಇಂಗ್ಲೆಂಡ್ ಪ್ರವಾಸ ಮುಗಿಯಲಿದ್ದು, ಐಸಿಸಿ ಟಿ20 ವಿಶ್ವಕಪ್ ತನಕ ಭಾರತದ ಮುಂದೆ ಯಾವುದೇ ಅಂತಾರಾಷ್ಟ್ರೀಯ ಸರಣಿ ಇಲ್ಲ. ಹೀಗಾಗಿ ಬಿಸಿಸಿಐ ಸೆ. 15-ಅ. 15ರ ನಡುವಿನ ಅವಧಿಯಲ್ಲಿ ಐಪಿಎಲ್ ನಡೆಸುವ ಯೋಜನೆಯೊಂದನ್ನು ಹಾಕಿಕೊಂಡಿದೆ.
ಇದಕ್ಕಾಗಿ 2ನೇ ಹಾಗೂ 3ನೇ ಟೆಸ್ಟ್ ಪಂದ್ಯಗಳ ನಡು ವಿನ ಅವಧಿಯನ್ನು 9ರಿಂದ 4 ದಿನಗಳಿಗೆ ಇಳಿಸಲು ಬಿಸಿಸಿಐ ಇಸಿಬಿಗೆ ಮನವಿ ಮಾಡುವ ಸಾಧ್ಯತೆ ಇದೆ. ಆಗ ಟೆಸ್ಟ್ ಸರಣಿ ಕೂಡ ಬೇಗ ಮುಗಿಯುವುದರಿಂದ ಭಾರತ ಮತ್ತು ಇಂಗ್ಲೆಂಡ್ ಆಟಗಾರರನ್ನು ಯುಎಇಗೆ ಕರೆದೊಯ್ಯಲು ಅನುಕೂಲವಾಗುತ್ತದೆ ಎಂಬುದು ಬಿಸಿಸಿಐ ಲೆಕ್ಕಾಚಾರ.
ಅಕಸ್ಮಾತ್ ಟೆಸ್ಟ್ ಸರಣಿ ನಿಗದಿತ ಸಮಯದಲ್ಲೇ ಮುಗಿದರೆ ಉಳಿದ 27 ಲೀಗ್ ಪಂದ್ಯಗಳನ್ನು ತೀವ್ರ ಒತ್ತಡದಲ್ಲಿ ಮುಗಿಸಿ, ಪ್ಲೇ ಆಫ್ ಪಂದ್ಯಗಳಿಗೆ ಅಣಿಯಾಗಬೇಕಾಗುತ್ತದೆ.