ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಸದ್ದಿಲ್ಲದೆ ಹೊಸಚಿತ್ರವೊಂದನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಸೆಪ್ಟೆಂಬರ್ 10′. ಇದೇನಿದು ಸಾಯಿಪ್ರಕಾಶ್ ತಮ್ಮ ಚಿತ್ರಕ್ಕೆ ಇಂಥದ್ದೊಂದು ವಿಭಿನ್ನ ಟೈಟಲ್ ಇಟ್ಟಿದ್ದಾರೆ ಅಂದ್ರೆ, ಅದಕ್ಕೊಂದು ಬಲವಾದ ಕಾರಣವಿದೆ.
ಬಹುತೇಕರಿಗೆ ಗೊತ್ತಿರುವಂತೆ, ಸೆಪ್ಟೆಂಬರ್ 10ನೇ ತಾರೀಕನ್ನು “ವಿಶ್ವ ಆತ್ಮಹತ್ಯಾ ನಿವಾರಣ’ ದಿನ ಎಂದು ಘೋಷಿಸಲಾಗಿದೆ. ಈ ಚಿತ್ರ ಕೂಡಾ ಆತ್ಮಹತ್ಯೆಗೆ ಯೋಚಿಸುವವರ ಮನಸ್ಥಿತಿ, ಅವರ ಮಾನಸಿಕ ತೊಳಲಾಟ, ದುಡುಕಿನ ನಿರ್ಧಾರಗಳ ಬಗ್ಗೆ ಕುರಿತಾಗಿದೆಯಂತೆ. ಹಾಗಾಗಿ ಚಿತ್ರದ ಕಥಾಹಂದರ ಮತ್ತು ಆಶಯ ಎರಡಕ್ಕೂ ಪೂರಕವಾಗಿರುವುದರಿಂದ, ತಮ್ಮ ಚಿತ್ರಕ್ಕೆ “ಸೆಪ್ಟೆಂಬರ್ 10′ ಎಂದು ಟೈಟಲ್ ಇಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸಾಯಿಪ್ರಕಾಶ್.
ಇನ್ನು ತೆಲಂಗಾಣ ಮೂಲದ ಕ್ಯಾಪ್ಟನ್ ಜಿ. ಜಿ ರಾವ್ ಎಂಬುವವರು ಬರೆದಿರುವ ಅನೇಕ ನೈಜ ಸಂಗತಿಗಳನ್ನು ಇಟ್ಟುಕೊಂಡು ಬರೆಯಲಾಗಿರುವ ಕೃತಿಯನ್ನು ಆಧರಿಸಿ “ಸೆಪ್ಟೆಂಬರ್ 10′ ಚಿತ್ರಕ್ಕೆ ಕಥೆ ಹೆಣೆಯಲಾಗಿದೆಯಂತೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ಸಾಯಿ ಪ್ರಕಾಶ್, “ಪ್ರತಿವರ್ಷ ಲಕ್ಷಾಂತರ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ, ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಆತ್ಮಹತ್ಯೆಗೆ ಯೋಚನೆ ಬಂದ ಆ ಕ್ರೂರ ಘಳಿಗೆಯನ್ನು ಕೆಲ ಸಮಯ ಮೆಟ್ಟಿ ನಿಂತರೆ ಮುಂದೆ ಗೆಲುವು ನಮ್ಮನ್ನು ಕೈಬೀಸಿ ಕರೆಯುತ್ತದೆ. ಇದೇ ವಿಷಯವನ್ನು “ಸೆಪ್ಟೆಂಬರ್ 10′ ಸಿನಿಮಾದ ಮೂಲಕ ಹೇಳುತ್ತಿದ್ದೇವೆ. ಈ ಸಿನಿಮಾದಿಂದ ಆತ್ಮಹತ್ಯೆಗೆ ಯೋಚಿಸುವ ಒಬ್ಬರಾದರೂ, ನಿರ್ಧಾರವನ್ನು ಕೈಬಿಟ್ಟರೆ ನಾವು ಈ ಸಿನಿಮಾ ಮಾಡಿರುವುದಕ್ಕೂ ಸಾರ್ಥಕ’ ಎನ್ನುತ್ತಾರೆ.
ಇನ್ನು “ಸೆಪ್ಟೆಂಬರ್ 10′ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಸೈಕಿಯಾಟ್ರಿಸ್ಟ್ ಆಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ, ರಶಿತಾ ಮಲ್ನಾಡ್, ಶಿವಕುಮಾರ್, ಶ್ರೀರಕ್ಷಾ, ಸಿಹಿಕಹಿ ಚಂದ್ರು, ರಮೇಶ್ ಭಟ್, ತನುಜಾ, ಜಯಸಿಂಹ, ಅನಿತಾ ರಾಣಿ ಸೇರಿದಂತೆ ಅನೇಕ ಕಲಾವಿದರು “ಸೆಪ್ಟೆಂಬರ್ 10′ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗಷ್ಟೇ “ಸೆಪ್ಟೆಂಬರ್ 10′ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರತಂಡ ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ “ಸೆಪ್ಟೆಂಬರ್ 10′ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಸಾಯಿಪ್ರಕಾಶ್ ಮತ್ತು ತಂಡ.