ಶ್ರೀನಗರ /ಹೊಸದಿಲ್ಲಿ: ಉಗ್ರರಿಂದ ಹಣಕಾಸು ನೆರವು ಪಡೆದಿರುವುದು ಬಹಿರಂಗವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಶನಿವಾರ ಕಾಶ್ಮೀರ ಮತ್ತು ದೆಹಲಿಯ ಹಲವೆಡೆ ಪ್ರತ್ಯೇಕತಾವಾದಿ ನಾಯಕರು ಮತ್ತು ಉದ್ಯಮಿಗಳ ನಿವಾಸಗಳ ಮೇಲೆ ದಾಳಿ ನಡೆಸಿದೆ.
ನಿನ್ನೆ ಸಂಜೆ ಪ್ರಾಥಮಿಕ ತನಿಖೆ ಮುಗಿಸಿ ಕೇಸ್ ದಾಖಲಿಸಿಕೊಂಡಿದ್ದ ಎನ್‌ಐಎ ಕಾಶ್ಮೀರದ 14 ಕಡೆ ಮತ್ತು ದೆಹಲಿಯ 8 ಕಡೆ ಪ್ರತ್ಯೇಕತವಾದಿಗಳ ನಿವಾಸಗಳ ಮೇಲೆ ನಸುಕಿನಲ್ಲೇ ದಾಳಿ ನಡೆಸಿ ಶಾಕ್ ನೀಡಿದೆ.
ಪ್ರತ್ಯೇಕತಾವಾದಿ ನಾಯಕರಾದ ನಯೀಮ್ ಖಾನ್, ಬಿಟ್ಟಾ ಕರಾಟೆ , ಖ್ವಾಜಿ ಜಾವೇದ್ ಬಾಬಾ, ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಮೂರು ಇಂಡಿಯಾ ಟುಡೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮೂವರೂ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸಲು ಪಾಕ್ ಉಗ್ರ ಸಂಘಟನೆಗಳಿಂದ ಹಣ ಪಡೆದಿರುವುದು ಬಹಿರಂಗೊಂಡಿತ್ತು.
ಹುರಿಯತ್ ಕಾನ್ಫರೆನ್ಸ್ ನಾಯಕರಾದ ಸಯ್ಯದ್ ಅಲಿ ಷಾ ಗಿಲಾನಿ ಆಪ್ತರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.
ದೆಹಲಿಯ 8 ಮಂದಿ ಹವಾಲಾ ಜಾಲದೊಂದಿಗೆ ನಂಟು ಹೊಂದಿದ್ದ ವ್ಯಾಪಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಹಫೀಜ್ ಸಯೀದ್ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಹಣಕಾಸಿನ ನೆರವು ನೀಡುತ್ತಿರುವುದು ತಿಳಿದು ಬಂದ ಹಿನ್ನಲೆಯಲ್ಲಿ ದಾಳಿ ಕೈಗೊಳ್ಳಲಾಗಿದೆ.