ಮಹಾನಗರ: ಮಂಗಳೂರು ಸ್ಮಾರ್ಟ್ ಸಿಟಿ – ಕುಡ್ಸೆಂಪ್ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕುಡಿಯುವ ನೀರು ಸರಬರಾಜು ಹಾಗೂ ಯುಜಿಡಿ ಕಾಮಗಾರಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ದೂರುಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತ್ಯೇಕ ತಂಡ ರಚನೆಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ಈಗಾಗಲೇ ಸ್ಮಾರ್ಟ್ ಸಿಟಿ ಹಾಗೂ ಕುಡ್ಸೆಂಪ್ ಯೋಜನೆಗಳ ಅನೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಈಗ ಪ್ರಗತಿ ಹಂತದಲ್ಲಿರುವ ಪ್ರತಿಯೊಂದು ಕಾಮಗಾರಿಯೂ ಕೂಡ ಯಾವ ಹಂತದಲ್ಲಿದೆ ಹಾಗೂ ಕಾಮಗಾರಿಯ ವಿವರ ಸಂಗ್ರಹಿಸಲು ಮನಪಾ ಸದಸ್ಯರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಹಾಗೂ ಕುಡ್ಸೆಂಪ್ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ತಂಡ ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ತಾಂತ್ರಿಕ ತಂಡ ನಗರದಲ್ಲಿ ನಗರ ಪಾಲಿಕೆ, ಕುಡ್ಸೆಂಪ್ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ ಅಥವಾ ಪ್ರಗತಿ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಿದೆ. ಕಾಮಗಾರಿಯಲ್ಲಿ ದೋಷಗಳು ಕಂಡು ಬಂದರೆ ಅದನ್ನು ಸರಿಪಡಿಸಲು ಏನೆಲ್ಲ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್, ಕುಡ್ಸೆಂಪ್ ಪ್ರಾಜೆಕ್ಟ್ ಡೈರೆಕ್ಟರ್ ಮಂಜುನಾಥ್, ಪಾಲಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ, ಎಸ್.ಇ.ಝೆಡ್ ಅಧಿಕಾರಿಗಳು, ಪಾಲಿಕೆ ಸದಸ್ಯರು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಡಿಯುವ ನೀರು ಪೈಪ್‌ಲೈನ್; ಪುನರ್ ಪರಿಶೀಲನೆ
ನಗರದಲ್ಲಿ ಪ್ರತೀ ಮನೆಗೂ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಅಮೃತ್ ಯೋಜನೆ ಕಾಮಗಾರಿಯ ಕುರಿತು ಮಾಹಿತಿ ಪಡೆಯಲಾಗಿದೆ. ನಗರದಲ್ಲಿ ನೀರು ಸರಬರಾಜಿಗೆ ಗುರುತಿಸಿರುವ 48 ಝೋನ್‌ಗಳ ಪೈಕಿ 18 ಝೋನ್‌ಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಇನ್ನುಳಿದ ಝೋನ್‌ಗಳ ಸರ್ವೆ ಕಾರ್ಯಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗಳ ಪುನರ್ ಪರಿಶೀಲನೆ, ಪಂಪಿಂಗ್ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಸಂಪೂರ್ಣ ವರದಿ ಪಡೆಯಲಾಗುವುದು ಎಂದು ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.